ಬೆಂಗಳೂರು : 40 ಲಕ್ಷ ಖರ್ಚು ಮಾಡಿ ಪ್ಯಾಲೆಸ್ ಗ್ರೌಂಡ್‌ನಲ್ಲಿ ಅದ್ದೂರಿ ರಿಸೆಪ್ಷನ್ ಮಾಡಿಕೊಂಡು ಶ್ರೀಲಂಕಾಕ್ಕೆ ಹನಿಮೂನ್ ಹೋಗಿದ್ದ ನವದಂಪತಿ ಅರ್ಧದಲ್ಲೇ ವಾಪಸ್ಸಾಗಿದ್ದು, ಮದುವೆಯಾಗಿ ಎರಡು ತಿಂಗಳು ಕಳೆಯುವ ಮುನ್ನವೇ ನವವಧು ಗಾನವಿ ಎಂಬಾಕೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ.
ಸೂರಜ್ ಹಾಗೂ ಗಾನವಿ ಅಕ್ಟೋಬರ್ 29ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟು, ಪ್ಯಾಲೆಸ್ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದರು. ಕಳೆದ ಹತ್ತು ದಿನಗಳ ಹಿಂದೆ ಶ್ರೀಲಂಕಾಗೆ ಹನಿಮೂನ್‌ಗೆಂದು ಹೋಗಿದ್ದರು. ಆದರೆ ಅರ್ಧಕ್ಕೆ ಶ್ರೀಲಂಕಾದಿಂದ ಇಬ್ಬರು ವಾಪಸ್ಸಾಗಿದ್ದರು. ಈ ಬಗ್ಗೆ ಗಾನವಿ ಕುಟುಂಬದವರು ಪ್ರಶ್ನೆ ಮಾಡಿದ್ರೆ ‘ನಿಮ್ಮ ಮಗಳನ್ನ ಕರೆದುಕೊಂಡು ಹೋಗ್ರಿ’ ಎಂದು ಹೇಳಿದ್ದರು ಎಂಬ ಆರೋಪ ಸೂರಜ್ ಕುಟುಂಬದ ಮೇಲೆ ಕೇಳಿಬಂದಿದೆ.
ಬುಧವಾರ (ಡಿ.25) ಮಧ್ಯಾಹ್ನ ಹೊತ್ತಿಗೆ ಪತಿ ಸೂರಜ್ ಮನೆಯಲ್ಲಿ ನವವಧು ಆತ್ಮಹತ್ಯೆಗೆ ಯತ್ನಿಸಿದ್ದು, ಕುಟುಂಬಸ್ಥರ ಸಮಯ ಪ್ರಜ್ಞೆಯಿಂದ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಗಾನವಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಧುವಿನ ಕುಟುಂಬಸ್ಥರು ವರನ ಕುಟುಂಬಸ್ಥರ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪತಿ ಮನೆಯವರ ಕಿರುಕುಳ ತಾಳಲಾಗದೇ ಆತ್ಮಹತ್ಯೆ ಯತ್ನಿಸಿದ್ದಾಳೆ ಎಂದು ಆರೋಪಿಸಿದ್ದಾರೆ. ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಎಂದು ಕೇಸ್ ದಾಖಲು ಮಾಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಲಿಸ್ಟ್ ‘ಎ’ ಪದಾರ್ಪಣೆಯಲ್ಲೇ ವಿಶ್ವದಾಖಲೆ | ಜಾಂಟಿ ರೋಡ್ಸ್ ಹಿಂದಿಕ್ಕಿದ 24ರ ಹರೆಯದ ವಿಘ್ನೇಶ್ ಪುತ್ತೂರು!



















