ಬೆಂಗಳೂರು : ಬೆಂಗಳೂರು ರಿಯಲ್ ಎಸ್ಟೆಟ್ ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ನಗರದ ಪ್ರೀಮಿಯಂ ವಸತಿ ಆಸ್ತಿಗಳ ಬೆಲೆ ಏರಿಕೆ ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ನೈಟ್ ಫ್ರಾಂಕ್ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆಯ ಪ್ರೈಮ್ ಗ್ಲೋಬಲ್ ಸಿಟಿಸ್ ಇಂಡೆಕ್ಸ್ 2025 ವರದಿಯ ಪ್ರಕಾರ, ವಿಶ್ವದ 46 ನಗರಗಳ ಪೈಕಿ ಬೆಂಗಳೂರು 4 ನೇ ಸ್ಥಾನ ಪಡೆದುಕೊಂಡಿದೆ.
ಕಳೆದ ಒಂದು ವರ್ಷದಲ್ಲಿ ಬೆಂಗಳೂರಿನಲ್ಲಿ ಐಷಾರಾಮಿ ಮನೆಗಳ ಬೆಲೆ ಶೇ.10.2 ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪಟ್ಟಿಯಲ್ಲಿ ಭಾರತದ ಇತರೆ ನಗರಗಳಾದ ಮುಂಬೈ ಮತ್ತು ದೆಹಲಿ ಬೆಂಗಳೂರಿನ ನಂತರದ ಸ್ಥಾನಗಳಲ್ಲಿವೆ.
ಮುಂಬೈ 6ನೇ ಸ್ಥಾನದಲ್ಲಿದ್ದರೆ, ರಾಷ್ಟ್ರ ರಾಜಧಾನಿ ದೆಹಲಿ 15ನೇ ಸ್ಥಾನದಲ್ಲಿದೆ. ಬೆಂಗಳೂರು ಮತ್ತು ನಗರದ ಸುತ್ತಮುತ್ತ ಪ್ರಗತಿಯಲ್ಲಿರುವ ಅಭಿವೃದ್ದಿ ಯೋಜನೆಗಳು ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ ಎಂದು ವರದಿ ಹೇಳಿದೆ.
ಮಾತ್ರವಲ್ಲದೇ ಐಷಾರಾಮಿ ಮನೆಗಳ ಬೆಲೆಯೂ ಹೆಚ್ಚುತ್ತಿರುವುದು ಮುಂದಿನ ದಿನದಲ್ಲಿ ಬೆಂಗಳೂರು ಜೀವನ ಇನ್ನಷ್ಟು ದುಬಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಜಾಗತಿಕ ಶ್ರೇಣಿಯಲ್ಲಿ ಬೆಂಗಳೂರಿಗೆ ಉನ್ನತ ಸ್ಥಾನ ದೊರಕಿದೆ. ದಕ್ಷಿಣ ಕೊರಿಯಾದ ಸಿಯೋಲ್- ಶೇ. 25.2, ಜಪಾನ್‌ನ ಟೋಕಿಯೋ-ಶೇ. 16.3, ಯುಐಎ ನ ದುಬೈನಲ್ಲಿ ಶೇ. 15.8, ಕರ್ನಾಟಕದ ಬೆಂಗಳೂರು- ಶೇ. 10.2 ರಷ್ಟು ದುಬಾರಿಯಾಗಿದೆ ಎಂದು ಅನುಕ್ರಮಣಿಕೆ ತಿಳಿಸುತ್ತಿದೆ. ರಿಯಲ್ ಎಸ್ಟೇಟ್ ವಿಚಾರದಲ್ಲಿ ಸಿಲಿಕಾನ್ ಸಿಟಿ ನಮ್ಮ ಬೆಂಗಳೂರು ವಿಶ್ವದಲ್ಲಿ 4ನೇ ದುಬಾರಿ ನಗರ ಅನ್ನಿಸಿಕೊಂಡಿದೆ.


















