ಹರಾಜು ಮೂಲಕ ಸ್ಥಿರಾಸ್ತಿ ಹರಾಜಿಗೆ ಪಾಲಿಕೆ ಚಿಂತನೆ ನಡೆಸಿದೆ. ಹರಾಜು ಮೂಲಕ ಪಾಲಿಕೆ ಸ್ವತ್ತುಗಳನ್ನು ಬಿಕರಿ ಮಾಡಲೂ ಪಾಲಿಕೆ ಮುಂದಾಗಿದೆ. ಆದಾಯ ಕ್ರೋಡೀಕರಣದ ಹಿನ್ನೆಲೆಯಲ್ಲಿ ತನ್ನ ಒಡೆತನದ ಆಸ್ತಿಗಳ ಮಾರಾಟಕ್ಕೆ ಬಿಬಿಎಂಪಿ ಮುಂದಾಗಿದೆ.
ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಗುತ್ತಿಗೆ ನೀಡಿರುವ ಆಸ್ತಿಗಳನ್ನು ಬಹಿರಂಗವಾಗಿ ಹರಾಜು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಪಾಲಿಕೆ ಒಡೆತನದ ಗುತ್ತಿಗೆ ನೀಡಿರುವ ಆಸ್ತಿಗಳಿಂದ ಪಾಲಿಕೆಗೆ ಆದಾಯ ತೀರಾ ಕಡಿಮೆಯಾಗಿದೆ. ಹೀಗಾಗಿ ಆಸ್ತಿ ಮಾರಾಟಕ್ಕೆ ಮುಂದಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 6,815 ಆಸ್ತಿಗಳಿವೆ. ಸುಮಾರು 400ರಷ್ಟು ಆಸ್ತಿಗಳು ನಗರದ ಕೇಂದ್ರ ಭಾಗದಲ್ಲಿವೆ. ಇವುಗಳ ಮಾರುಕಟ್ಟೆಯ ಬೆಲೆ ಸಾವಿರಾರು ಕೋಟಿ ರೂ. ಈಗಾಗಲೇ ಬಿಬಿಎಂಪಿ ಖಾಸಗಿ ಸಂಸ್ಥೆಗಳಿಗೆ, ಶಾಲೆಗಳಿಗೆ ಎಕರೆಗಟ್ಟಲೆ ಭೂಮಿಯನ್ನು ವಾರ್ಷಿಕ 50 ರೂ. 100 ರೂ. ಗಳಂತೆ ಬಾಡಿಗೆ ನೀಡುತ್ತಿದೆ. ಆದರೆ, ಇದೇ ಆಸ್ತಿಗಳನ್ನು ಗುತ್ತಿಗೆ ನೀಡಿ, ಖಾಸಗಿಯವರು ಕೋಟ್ಯಾಂತರ ರೂ. ಗಳಿಸುತ್ತಿದ್ದಾರೆ. ಆದರೆ, ಪಾಲಿಕೆಗೆ ಮಾತ್ರ ಸಾವಿರಾರು ರೂ.ಗಳಲ್ಲಿ ಆದಾಯ ಬರುತ್ತಿದೆ.
ಪಾಲಿಕೆ ಭೋಗಕ್ಕೆ ನೀಡಿರುವ ಆಸ್ತಿಯ ಮೊತ್ತ ಒಟ್ಟು 50 ಸಾವಿರ ಕೋಟಿ ರೂ. ಆಗಿದೆ. ಹೀಗಾಗಿ ಪಾಲಿಕೆಯು ಆಸ್ತಿ ಮಾರಿ ಹಣ ಕ್ರೂಢೀಕರಿಸಲು ಮುಂದಾಗಿದೆ. ಈಗಾಗಲೇ ಆಸ್ತಿ ಮಾರುವ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿ ಭಾಗವಹಿಸುವಂತ್ತಿಲ್ಲ. ಕೇವಲ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಇಲಾಖೆಗಳು,.ಸಂಸ್ಥೆಗಳಿಗೆ ಮಾತ್ರ ಹರಾಜಿನಲ್ಲಿ ಅವಕಾಶ ನೀಡಲಾಗಿದೆ. ನಿಗಮ ಮಂಡಳಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹರಾಜಿನಲ್ಲಿ ಭಾಗವಹಿಸಬಹುದು.