ವಿಶ್ವ ವಿಖ್ಯಾತ ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ರಾತ್ರಿ 12.30ಕ್ಕೆ ದ್ರೌಪದಿ ಕರಗ ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಈ ಬಾರಿಯ ಕರಗ ಅದ್ದೂರಿಯಾಗಿ ನಡೆಯಲಿದೆ.
ಐತಿಹಾಸಿಕ ಬೆಂಗಳೂರು ಧರ್ಮರಾಯಸ್ವಾಮಿ ದ್ರೌಪದಿ ಕರಗ ಉತ್ಸವ ಈ ವರ್ಷವೂ ವೈಭವದಿಂದ ನಡೆಯಲು ಸಜ್ಜಾಗಿದೆ. ಕಳೆದ ಒಂದು ವಾರದಿಂದ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದ್ದು, ಧರ್ಮರಾಯಸ್ವಾಮಿ ದೇವಾಲಯ ನವ ವಧುವಿನಂತೆ ಕಂಗೊಳಿಸುತ್ತಿದೆ.
ಕರಗ ಸಾಗುವ ಮಾರ್ಗದುದ್ದಕ್ಕೂ ರಸ್ತೆ ಸ್ವಚ್ಛತೆ, ಅಗಲೀಕರಣ, ವಿದ್ಯುತ್ ದೀಪಾಲಂಕಾರ ಹಾಗೂ ಹೂವಿನ ಅಲಂಕಾರಗಳಿಂದ ನಗರ ಸಜ್ಜಾಗಿದೆ. ಈ ಬಾರಿ ಕೂಡ ಜ್ಞಾನೇಂದ್ರ ಅವರು ಕರಗ ಹೊರುವ ಜವಾಬ್ದಾರಿ ಹೊತ್ತಿದ್ದಾರೆ.ಕರಗ ಸಮಿತಿ ಅಧ್ಯಕ್ಷ ಚಲಕರಿ ನಾರಾಯಣ ಮತಾನಾಡಿ ಯಾವುದೇ ಗೊಂದಲ ಇಲ್ಲ. ಕರಗ ಸಂಪ್ರದಾಯದಂತೆ ಮಸ್ತಾನ್ ದರ್ಗಾಕ್ಕೆ ಹೋಗುತ್ತದೆ. ಎಲ್ಲಾ ಧರ್ಮದವರು ಒಂದಾಗಿ ಈ ಉತ್ಸವವನ್ನು ಆಚರಿಸುತ್ತಾರೆ. ಈ ಬಾರಿ ಕೂಡ ಶಾಂತಿಯುತವಾಗಿ ಅದ್ದೂರಿಯಾಗಿ ನಡೆಯಲಿದೆ ಎಂದು ತಿಳಿಸಿದರು.
ರೂಟ್ ಮ್ಯಾಪ್ :
ಇಂದು ರಾತ್ರಿ ಕರಗ ತಾಯಿ ಮೆರವಣಿಗೆ ಧರ್ಮರಾಯ ದೇಗುಲ ಪ್ರದಕ್ಷಿಣೆಯಿಂದ ಆರಂಭವಾಗಿ, ಕುಂಬಾರಪೇಟೆ ರಸ್ತೆ – ರಾಜಮಾರ್ಕೆಟ್ ಸರ್ಕಲ್ – ಸಿಟಿ ಮಾರ್ಕೆಟ್ – ಕೋಟೆ ಆಂಜನೇಯಸ್ವಾಮಿ ದೇವಸ್ಥಾನ – ವಾಪಾಸ್ ಪೊಲೀಸ್ ರಸ್ತೆ ಮೂಲಕ ಕಾಟನ್ ಪೇಟೆ – ಮಸ್ತಾನ್ ಸಾಬ್ ದರ್ಗಾ – ಬಳೇಪೇಟೆ – ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಸಾಗಲಿದೆ. ನಾಳೆ ಬೆಳಗ್ಗೆ 8 ಗಂಟೆಗೆ ಕಬ್ಬನ್ ಪೇಟೆ ಮಾರ್ಗವಾಗಿ ವಾಪಾಸ್ ಧರ್ಮರಾಯಸ್ವಾಮಿ ದೇಗುಲ ಪ್ರವೇಶ ಮಾಡಲಿದೆ.
ಸಿಕ್ಯುರಿಟಿ & ವ್ಯವಸ್ಥೆ :
ಜಿಬಿಎ, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸುಮಾರು ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಡಿಸಿಪಿ ನೇತೃತ್ವದಲ್ಲಿ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, 3 KSRP ತುಕಡಿಗಳು ಸಹ ನಿಯೋಜಿಸಲಾಗಿದೆ.
ಸುಮಾರು 10 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸಿಎಂ ಹಾಗೂ ಡಿಸಿಎಂ ಕೂಡ ಕರಗ ಉತ್ಸವಕ್ಕೆ ಭಾಗವಹಿಸುವ ಸಾಧ್ಯತೆ ಇದೆ ಎಂದು ಅಧ್ಯಕ್ಷರು ತಿಳಿಸಿದರು.ಇನ್ನೂ ಈ ಬಾರಿಯ ಬೆಂಗಳೂರು ಕರಗ ಮಹೋತ್ಸವಕ್ಕೆ ಸಿಲಿಕಾನ್ ಸಿಟಿ ಸಜ್ಜಾಗಿದೆ. ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಸಿದ್ಧತೆಗಳು ಜೋರಾಗಿದ್ದು, ಲಕ್ಷಾಂತರ ಭಕ್ತರು ದ್ರೌಪದಿ ಕರಗವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.
ಬೆಂಗಳೂರು ಕರಗದ ಸಂಭ್ರಮಕ್ಕೆ ನಗರವೇ ಸಾಕ್ಷಿಯಾಗಲಿದ್ದು, ಸಾಂಸ್ಕೃತಿಕ ಐಕ್ಯತೆಯ ಪ್ರತೀಕವಾಗಿ ಈ ಮಹೋತ್ಸವ ಮತ್ತೊಮ್ಮೆ ಮೆರೆಯಲಿದೆ.


















