ಬೆಂಗಳೂರು: ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರುಗಳ ಮಧ್ಯೆಯೇ ಹಗ್ಗ ಜಗ್ಗಾಟ ನಡೆಯುತ್ತಿದೆ.
ಕನಕಪುರ, ನೆಲಮಂಗಲದಲ್ಲಿ ಎರಡನೇ ಏರ್‌ಪೋರ್ಟ್ ಬೇಡವೇ ಬೇಡ ಎಂದು ಬಯಲು ಸೀಮೆ, ಉತ್ತರ ಕರ್ನಾಟಕ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶಿರಾದಲ್ಲೇ ಎರಡನೇ ಏರ್ ಪೋರ್ಟ್ ನಿರ್ಮಾಣ ಮಾಡಬೇಕೆಂದು 30ಕ್ಕೂ ಅಧಿಕ ಶಾಸಕರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಹೀಗಾಗಿ ನವದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಶಾಸಕರು ಮನವಿ ಸಲ್ಲಿಸಿದ್ದಾರೆ. 30ಕ್ಕೂ ಅಧಿಕ ಶಾಸಕರು ಪಕ್ಷಾತೀತವಾಗಿ ವಿರೋಧಿಸಿ ಪತ್ರ ಬರೆದಿದ್ದಾರೆ. ಸಿರಾದಲ್ಲಿ ಏರ್‌ಪೋರ್ಟ್ ನಿರ್ಮಾಣ ಮಾಡುವುದರಿಂದ ಬಯಲುಸೀಮೆ, ಉತ್ತರ ಕರ್ನಾಟಕದ ಭಾಗಕ್ಕೆ ಹೆಚ್ಚು ಅನುಕೂಲ ಆಗಲಿದೆ. ಶಿರಾದಲ್ಲಿ ಚೆನ್ನೈ-ಮುಂಬೈ ಹೆದ್ದಾರಿ ಹಾದು ಹೋಗಿದೆ. ಹೆಚ್ ಎಎಲ್ ನಂತಹ ರಕ್ಷಣಾ ಸಂಸ್ಥೆ ಇದೆ. ಅತಿದೊಡ್ಡ ವಸಂತನರಸಾಪುರ ಕೈಗಾರಿಕಾ ವಸಹಾತು ಇದೆ. ಶೀಘ್ರದಲ್ಲೇ ಜಪಾನ್ ಟೌನ್‌ಶಿಪ್ ಕೂಡ ನಿರ್ಮಾಣ ಆಗುತ್ತಿದೆ.
ಅಂತಾರಾಷ್ಟ್ರೀಯ ಕ್ರೀಡಾಂಗಣವಾಗುತ್ತಿದೆ. ಎತ್ತಿನಹೊಳೆ, ಭದ್ರಾ ಮೇಲ್ದಂಡೆ, ಹೇಮಾವತಿ ನೀರಾವರಿ ಸೌಲಭ್ಯ ಇದೆ. ತುಮಕೂರು-ರಾಯದುರ್ಗ ರೈಲ್ವೇ ಮಾರ್ಗ ಕೂಡ ಹಾದು ಹೋಗಲಿದೆ. ಹೀಗಾಗಿ ಸಿರಾದಲ್ಲಿ ಏರ್‌ಪೋರ್ಟ್ ನಿರ್ಮಾಣವಾದರೆ ಬೆಂಗಳೂರಿನಲ್ಲಿ ಅರ್ಧದಷ್ಟು ಟ್ರಾಫಿಕ್ ದಟ್ಟಣೆ ಕಡಿಮೆ ಆಗಲಿದೆ. ಹೀಗಾಗಿ ಶಿರಾದಲ್ಲೇ ಎರಡನೇ ಏರ್ ಪೋರ್ಟ್ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಮೂಲಕ ಕನಕಪುರ, ನೆಲಮಂಗಲದಲ್ಲಿ ಏರ್‌ಪೋರ್ಟ್ ನಿರ್ಮಾಣಕ್ಕೆ ಬಯಲುಸೀಮೆ, ಉತ್ತರ ಕರ್ನಾಟಕ ಭಾಗದ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಷಯ ಕೂಡ ಕಾಂಗ್ರೆಸ್ ನಾಯಕರಿಗೆ ಕಗ್ಗಂಟಾಗಿ ಪರಿಣಮಿಸಿದೆ.



















