ಬೆಂಗಳೂರು: ಕೆಎಸ್ ಆರ್ ಟಿಸಿ, ಬಿಎಂಟಿಸಿ, ಮೆಟ್ರೋ ಟಿಕೆಟ್ ದರ ಹೆಚ್ಚಳದಿಂದ ಹೈರಾಣಾಗಿರುವ ಬೆಂಗಳೂರಿನ ಜನರಿಗೆ ಮತ್ತೊಂದು ಕಹಿ ಸುದ್ದಿ ಕಾದಿದೆ. ಶೀಘ್ರದಲ್ಲೇ, ಆಟೋ ದರವೂ ಹೆಚ್ಚಳವಾಗಲಿದೆ ಎಂದು ತಿಳಿದುಬಂದಿದೆ. ಆಟೋ ಚಾಲಕರ ಸಂಘಟನೆಗಳ ಜತೆ ಮಾರ್ಚ್ 12ರಂದು ಬೆಳಗ್ಗೆ 11 ಗಂಟೆಗೆ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದೆ. ಬೆಲೆಯೇರಿಕೆ ಕುರಿತು ತೀರ್ಮಾನವಾದರೆ, ಜನ ಹೆಚ್ಚು ಬೆಲೆ ತೆರಬೇಕಾಗುತ್ತದೆ.
ಕಳೆದ ವರ್ಷವೇ ಆಟೋ ಚಾಲಕರ ಸಂಘಟನೆಗಳು ಬೆಲೆಯೇರಿಕೆಗೆ ಆಗ್ರಹಿಸಿದ್ದವು. ಈಗ ಟ್ರಾಫಿಕ್ ಈಸ್ಟ್ ಡಿಸಿಪಿ ನೇತೃತ್ವದಲ್ಲಿ ಇನ್ ಫ್ಯಾಂಟ್ರಿ ರಸ್ತೆಯಲ್ಲಿರುವ ಡಿಸಿಪಿ ಕಚೇರಿಯಲ್ಲಿ ಸಭೆ ನಡೆಯಲಿದೆ. ಬೆಲೆಯೇರಿಕೆಗೆ ಆಟೋ ಚಾಲಕರ ಸಂಘಟನೆಗಳು ಪಟ್ಟು ಹಿಡಿದಿರುವ ಕಾರಣ, ಬೆಲೆಯೇರಿಕೆ ಘೋಷಣೆ ಮಾಡಲಾಗುತ್ತದೆ ಎಂದೇ ಹೇಳಲಾಗುತ್ತಿದೆ.
ಬೆಲೆಯೇರಿಕೆ ಎಷ್ಟಾಗಬಹುದು?
ಒಂದು ಕಿಲೋಮೀಟರ್ ಗೆ 5 ರೂಪಾಯಿ ಹೆಚ್ಚಿಸಬೇಕು ಎಂಬುದು ಆಟೋ ಚಾಲಕರ ಸಂಘಟನೆಗಳ ಆಗ್ರಹವಾಗಿದೆ. ಈಗ ಎರಡು ಕಿಲೋಮೀಟರ್ ಪ್ರಯಾಣಕ್ಕೆ 30 ರೂಪಾಯಿ ಮಿನಿಮಮ್ ಚಾರ್ಜ್ ಇದೆ. ಇದನ್ನು 40 ರೂಪಾಯಿಗೆ ಏರಿಕೆ ಮಾಡಬೇಕು ಎಂಬುದು ಸಂಘಟನೆಗಳ ಒತ್ತಾಯವಾಗಿದೆ. 2021ರಲ್ಲಿ ಆಟೋ ದರವನ್ನು ಏರಿಕೆ ಮಾಡಲಾಗಿತ್ತು.
ಆಟೋ ಸಿಎನ್ ಜಿ, ಎಲ್ ಪಿಜಿ ಬೆಲೆಯೇರಿಕೆಯಾಗಿದೆ. ಗ್ಯಾರಂಟಿ ಯೋಜನೆಗಳ ಭಾಗವಾಗಿ ಮಹಿಳೆಯರಿಗೆ ಬಸ್ ಗಳಲ್ಲಿ ಉಚಿತ ಸಂಚಾರ ಸೌಲಭ್ಯ ಇರುವುದರಿಂದ ಆಟೋ ಚಾಲಕರ ಆದಾಯಕ್ಕೆ ಕುತ್ತು ಬಂದಿದೆ. ಹಾಗಾಗಿ, ಬೆಲೆಯೇರಿಕೆ ಮಾಡಬೇಕು ಎಂಬುದಾಗಿ ಸಂಘಟನೆಗಳು ಪಟ್ಟು ಹಿಡಿದಿವೆ ಎಂದು ತಿಳಿದುಬಂದಿದೆ. ಆಟೋ ದರ ಹೆಚ್ಚಾದರೆ, ಓಲಾ, ಊಬರ್ ಸೇರಿ ಟ್ಯಾಕ್ಸಿಗಳ ಬೆಲೆಯೇರಿಕೆಗೂ ಕೂಗು ಜೋರಾಗಬಹುದು ಎನ್ನಲಾಗಿದೆ.