ಬೆಂಗಳೂರು : ಕರ್ನಾಟಕದ ಬೆಂಗಳೂರು, ಮೈಸೂರು ಸೇರಿ ಯಾವುದೇ ನಗರಗಳಲ್ಲಿ ಮನೆ ಖರೀದಿ ಮಾಡಬೇಕು, ಅಪಾರ್ಟ್ಮೆಂಟ್ ಖರೀದಿಸಬೇಕು ಎಂದರೆ ಲಕ್ಷಾಂತರ, ಕೋಟ್ಯಂತರ ರೂ. ಬೇಕು. ಇದಕ್ಕಾಗಿ ಬ್ಯಾಂಕ್‌ಗಳಿಂದ ಸಾಲ ಪಡೆಯಬೇಕು, ಪ್ರತಿ ತಿಂಗಳು ತಪ್ಪದೆ ಇಎಂಐ ಕಟ್ಟಬೇಕು. ನೀವೇನಾದರೂ ಹೀಗೆ ಮನೆ ಖರೀದಿಸಬೇಕು, ಫ್ಲ್ಯಾಟ್ ಖರೀದಿಸಬೇಕು ಎಂದರೆ, ನೀವು ನಿಮ್ಮ ಪತ್ನಿ ಹೆಸರಿನಲ್ಲಿ ಆಸ್ತಿ ಖರೀದಿಸಬೇಕು. ಇದರಿಂದ ತೆರಿಗೆ ಉಳಿತಾಯ ಸೇರಿ ಹಲವು ಉಪಯೋಗಗಳಿವೆ. ಆ ಉಪಯೋಗಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ.
ಮನೆ ಅಥವಾ ಫ್ಲ್ಯಾಟ್ ಅನ್ನು ಪತ್ನಿ ಹೆಸರಿನಲ್ಲಿ ಅಥವಾ ಜಂಟಿಯಾಗಿ ಖರೀದಿ ಮಾಡಿದರೆ ಹೆಚ್ಚುವರಿ ತೆರಿಗೆ ಪ್ರಯೋಜನ ಸಿಗುತ್ತದೆ. ತೆರಿಗೆಯಲ್ಲಿ ನೀವು ವಾರ್ಷಿಕವಾಗಿ 1.5 ಲಕ್ಷ ರೂಪಾಯಿಯಿಂದ 2 ಲಕ್ಷ ರೂಪಾಯಿವರೆಗೆ ವಿನಾಯಿತಿ ಪಡೆಯಬಹುದು. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ನೀವು ಅದನ್ನು ಕ್ಲೇಮ್ ಮಾಡಬಹುದಾಗಿದೆ.
ಸಾಲ ಪಡೆದರೆ ಬಡ್ಡಿ ಲಾಭ
ಪತ್ನಿ ಹೆಸರಿನಲ್ಲಿ ಗೃಹ ಸಾಲ ಪಡೆದರೆ ಎಸ್ ಬಿಐ, ಎಚ್.ಡಿ.ಎಫ್.ಸಿ ಸೇರಿ ಹಲವು ಬ್ಯಾಂಕ್ ಗಳು ಬಡ್ಡಿಯಲ್ಲಿ ರಿಯಾಯಿತಿ ನೀಡುತ್ತವೆ. ಶೇ.0.50ರಿಂದ ಶೇ.1ರಷ್ಟು ಬಡ್ಡಿದರವನ್ನು ಕಡಿಮೆ ಮಾಡುತ್ತವೆ. ಲಕ್ಷಾಂತರ ರೂಪಾಯಿ ಸಾಲವನ್ನು ವರ್ಷಗಳಗಟ್ಟಲೆ ಕಟ್ಟುವುದರಿಂದ ಬಡ್ಡಿಯ ಲಾಭವಾಗುತ್ತದೆ. ಪತ್ನಿಯು ಉದ್ಯೋಗದಲ್ಲಿದ್ದು, ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ ಬಡ್ಡಿ ರಿಯಾಯಿತಿಯ ಲಾಭ ಪಡೆಯಬಹುದು.
ಮುದ್ರಾಂಕ ಸುಂಕದಲ್ಲಿ ರಿಯಾಯಿತಿ
ಮಹಿಳೆಯರಿಗೆ ಸ್ಟಾಂಪ್ ಡ್ಯೂಟಿಯಲ್ಲಿ 2 ರಿಂದ 3 ರಷ್ಟು ರಿಯಾಯಿತಿಯನ್ನು ನೀಡುವುದನ್ನು ಕಾಣಬಹುದು. ಪುರುಷರು ಈ ಪ್ರಯೋಜನವನ್ನು ಪಡೆಯುವುದಿಲ್ಲ. ಉದಾಹರಣೆಗೆ, ಪುರುಷರು ಶೇ.6ರ ದರದಲ್ಲಿ ಸ್ಟ್ಯಾಂಪ್ ಸುಂಕವನ್ನು ಪಾವತಿಸಬೇಕಾಗುತ್ತದೆ. ಮಹಿಳೆಯರಿಗೆ ಶೇ.2 ರಷ್ಟು ರಿಯಾಯಿತಿ ಸಿಗುತ್ತದೆ. ಶೇ.4ರಷ್ಟು ದರದಲ್ಲಿ ಮುದ್ರಾಂಕ ಶುಲ್ಕ ಪಾವತಿಸಬೇಕಾಗುತ್ತದೆ. ಇದರಿಂದ ಸಾವಿರಾರು ರೂಪಾಯಿ ಉಳಿಯುತ್ತದೆ.
ಪಿಎಂಎವೈ ಯೋಜನೆ ಅನ್ವಯ ಸಬ್ಸಿಡಿ
ಪ್ರಧಾನ ಮಂತ್ರಿ ಆವಾಸ್ ಯೋಜನೆಯ(ಪಿಎಂಎವೈ) ಅಡಿಯಲ್ಲಿ ಬಡ್ಡಿ ಸಬ್ಸಿಡಿ ಪಡೆಯಬಹುದಾಗಿದೆ. ಇದರ ಪ್ರಯೋಜನ ಪಡೆಯಲು ಆಸ್ತಿಯ ಮಾಲಿಕತ್ವವನ್ನು ಪತಿ-ಪತ್ನಿ ಜಂಟಿಯಾಗಿ ಅಥವಾ ಮಹಿಳೆಯರ ಹೆಸರಿನಲ್ಲಿ ಮಾಡಿರಬೇಕು. ಮಹಿಳೆಯರು ಗೃಹ ಸಾಲವನ್ನು ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (ಸಿ.ಎಲ್.ಎಸ್.ಎಸ್.) ಮೂಲಕ ಪಡೆದಿದ್ದರೆ ಬಡ್ಡಿದರದಲ್ಲಿ ವಿನಾಯಿತಿ ಪಡೆಯಬಹುದು.
ಇದನ್ನೂ ಓದಿ : ಶಾಲಾ ಮಕ್ಕಳು ಓಡಾಡುವ ಸ್ಥಳದಲ್ಲೇ ಪುಂಡರ ವೀಲ್ಹಿಂಗ್ ಹುಚ್ಚಾಟ



















