ಲಾಹೋರ್: ಆಸ್ಟ್ರೇಲಿಯಾ ವಿರುದ್ದದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಬೆನ್ ಡಕೆಟ್ ಹೊಸ ದಾಖಲೆ ಸೃಷ್ಟಿಸಿದ್ದಾರೆ. 165 ರನ್‌ಗಳನ್ನು ಸಿಡಿಸುವ ಮೂಲಕ ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ನೂತನ ದಾಖಲೆ ಬರೆದಿದ್ದಾರೆ. ಬೆನ್ ಡಕೆಟ್ 3 ಸಿಕ್ಸರ್ ಹಾಗೂ 17 ಬೌಂಡರಿಗಳನ್ನು ಸಿಡಿಸಿದ್ದಾರೆ. ಅವರ 115ರ ಸ್ಟ್ರೈಕ್ ರೇಟ್‌ನಲ್ಲಿ ರನ್‌ಗಳನ್ನು ಗಳಿಸಿದ್ದಾರೆ.
ಇಂಗ್ಲೆಂಡ್ ತಂಡದ ಪರ ಮೂರನೇ ವಿಕೆಟ್‌ಗೆ ಜೊತೆಯಾದ ಬೆನ್ ಡಕೆಟ್ ಮತ್ತು ಜೋ ರೂಟ್ ಅವರು 158 ರನ್‌ಗಳನ್ನು ಕಲೆ ಹಾಕಿದರು. ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ 78 ಎಸೆತಗಳಲ್ಲಿ 68 ರನ್‌ಗಳನ್ನು ಕಲೆ ಹಾಕಿದರು. ಕೊನೆಯಲ್ಲಿ ಕೇವಲ10 ಎಸೆತಗಳಲ್ಲಿ ಅಜೇಯ 21 ರನ್‌ಗಳನ್ನು ಸಿಡಿಸಿ ಇಂಗ್ಲೆಂಡ್ ತಂಡ 350 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು.
ಬೆನ್ ಡಕೆಟ್ ದಾಖಲೆ
ಈ ಪಂದ್ಯದಲ್ಲಿ ಬೆನ್ ಡಕೆಟ್ ಅವರು ನೂತನ ಮೈಲುಗಲ್ಲು ತಲುಪಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಇತಿಹಾಸದಲ್ಲಿಯೇ ವೈಯಕ್ತಿಕ ಗರಿಷ್ಠ ಮೊತ್ತ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬೆನ್ ಡಕೆಟ್ ಬರೆದಿದ್ದಾರೆ. ಈ ವೇಳೆ ಅವರು 23 ವರ್ಷಗಳ ಹಳೆಯ ದಾಖಲೆ ಮುರಿದಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ 150 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಆಂಡಿ ಫ್ಲವರ್ ಮತ್ತು ನೇಥನ್ ಆಶ್ಲೆ ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಆಂಡಿ ಫ್ಲವರ್ ಅವರು 2002ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ 164 ಎಸೆತಗಳಲ್ಲಿ 145 ರನ್‌ಗಳನ್ನು ಕಲೆ ಹಾಕಿದ್ದರು. ಇನ್ನು ನೇಥನ್ ಆಶ್ಲೇ ಅವರು 2004ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಯುಎಸ್‌ಎ ವಿರುದ್ದದ ಪಂದ್ಯದಲ್ಲಿ 151 ಎಸೆತಗಳಲ್ಲಿ ಅಜೇಯ 145 ರನ್ ಬಾರಿಸಿದ್ದರು.

ಜೋ ರೂಟ್ ದಾಖಲೆ ಮುರಿದ ಡಕೆಟ್
ಬೆನ್ ಡಕೆಟ್ ಅವರು ತಮ್ಮದೇ ದೇಶದ ಆಟಗಾರ ಜೋ ರೂಟ್ ಅವರ ದಾಖಲೆಯೊಂದನ್ನು ಮುರಿದಿದ್ದಾರೆ. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಜೋ ರೂಟ್ 133 ರನ್‌ಗಳನ್ನು ಕಲೆ ಹಾಕಿದ್ದರು. 2002ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಜಿಂಬಾಬ್ವೆ ವಿರುದ್ದದ ಪಂದ್ಯದಲ್ಲಿ ಆ ದೇಶದ ಆಟಗಾರ ಮಾರ್ಕಸ್ ಟ್ರೆಸ್ಕೋಥಿಕ್ 119 ರನ್‌ಗಳನ್ನು ಗಳಿಸಿದ್ದರು. ಇಬ್ಬರ ದಾಖಲೆಯನ್ನೂ ಅವರು ಮುರಿದಿದ್ದಾರೆ.
ಡಕೆಟ್ ಸಾಧನೆಯ ಹೊರತಾಗಿಯೂ ಇಂಗ್ಲೆಂಡ್ ತಂಡ ಸೋಲು ಕಂಡಿದೆ. ಜೋಶ್ ಇಂಗ್ಲಿಸ್ ಸ್ಫೋಟಕ ಶತಕ ಹಾಗೂ ಮ್ಯಥ್ಯೂ ಶಾರ್ಟ್, ಅಲೆಕ್ಸ್ ಕ್ಯಾರಿ ಸಮಯೋಚಿತ ಆಟದ ನೆರವಿಂದ ಆಸೀಸ್ ತಂಡ 5 ವಿಕೆಟ್ ಗೆಲುವು ಸಾಧಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಬೆನ್ ಡಕೆಟ್ ದಾಖಲೆಯ ಶತಕದ (143 ಎಸೆತಗಳಲ್ಲಿ 165 ರನ್) ನೆರವಿಂದ 8 ವಿಕೆಟ್ ಕಳೆದುಕೊಂಡು 351 ರನ್ ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ಆಸೀಸ್ ತಂಡವು, ಆರಂಭಿಕ ಹೊಡೆತದ ಹೊರತಾಗಿಯೂ ಅಬ್ಬರಿಸಿ ಬೊಬ್ಬಿರಿದಿತು. ಜೋಶ್ ಇಂಗ್ಲಿಸ್ ದಾಖಲೆಯ ಶತಕದ ನೆರವಿಂದ ಕೇವಲ 47.3 ಓವರ್‌ಗಳಲ್ಲಿ 356 ರನ್ ಕಲೆ ಹಾಕಿ ಗೆಲುವಿನ ದಡ ಸೇರಿತು. ಇದು ಐಸಿಸಿ ಟೂರ್ನಿ ಇತಿಹಾಸದಲ್ಲೇ ದಾಖಲೆಯ ಯಶಸ್ವಿ ರನ್ ಚೇಸ್ ಆಗಿದೆ.