ಬಳ್ಳಾರಿ : ನಿನ್ನೆ ಬೆಳಿಗ್ಗೆಯಷ್ಟೇ ಬಳ್ಳಾರಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದ ಪವನ್ ನೆಜ್ಜೂರು ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಐಪಿಎಸ್ ಅಧಿಕಾರಿ ಪವನ್ ನೆಜ್ಜೂರು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಚಾರ್ಜ್ ತೆಗೆದುಕೊಂಡ ಕೆಲವೇ ಗಂಟೆಯಲ್ಲಿ ಬಳ್ಳಾರಿಯಲ್ಲಿ ಗಲಾಟೆ ನಡೆದಿತ್ತು. ಗುಂಡು ಹಾರಿಸಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿಯನ್ನು ಹತ್ಯೆ ಮಾಡಲಾಗಿತ್ತು. ಶಾಸಕ ಗಾಲಿ ಜನಾರ್ಧನ ರೆಡ್ಡಿ ಮನೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ಗಲಾಟೆಗಳನ್ನು ನಿಯಂತ್ರಿಸಲು ವಿಫಲವಾದ ಕಾರಣಕ್ಕಾಗಿ ಜಿಲ್ಲಾ ಎಸ್ಪಿ ಪವನ್ ನೆಜ್ಜೂರು ಅವರನ್ನು ಅಮಾನತು ಮಾಡಲಾಗಿದೆ.

ಬಳ್ಳಾರಿಯಲ್ಲಿ ನಿನ್ನೆ ಬೆಳಿಗ್ಗೆಯವರೆಗೂ ಶೋಭಾರಾಣಿ ಎಸ್ಪಿಯಾಗಿದ್ದರು. ಶೋಭಾರಾಣಿ ಅವರನ್ನು ಡಿಸೆಂಬರ್ 31ರ ರಾತ್ರಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ಅವರ ಸ್ಥಾನಕ್ಕೆ ಪವನ್ ನೆಜ್ಜೂರುರನ್ನು ನೇಮಕ ಮಾಡಲಾಗಿತ್ತು. ಜನವರಿ 1ರ ಬೆಳಿಗ್ಗೆ ಇವರು ಅಧಿಕಾರ ವಹಿಸಿಕೊಂಡಿದ್ದರು.
ಇದೀಗ ಬಳ್ಳಾರಿ ಗಲಭೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ವಿಫಲವಾಗಿದ್ದಾರೆ, ಜೊತೆಗೆ ಹಿರಿಯ ಅಧಿಕಾರಿಗಳಿಗೂ ಸರಿಯಾಗಿ ಮಾಹಿತಿ ನೀಡಿಲ್ಲ ಎಂಬ ಕಾರಣದಿಂದ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರು ವಿರುದ್ಧ ಕ್ರಮಕ್ಕೆ ಬಳ್ಳಾರಿ ಡಿಐಜಿ ಶಿಫಾರಸ್ಸು ಮಾಡಿದ್ದರು. ಈ ಶಿಫಾರಸ್ಸು ಆಧಾರದ ಮೇಲೆ ರಾಜ್ಯ ಸರ್ಕಾರ ಎಸ್ಪಿ ಪವನ್ ನೆಜ್ಜೂರ್ರನ್ನು ಸೇವೆಯಿಂದ ಅಮಾನತು ಮಾಡಿದೆ.
ಇದನ್ನೂ ಓದಿ : ಉಂಡ್ಕೊಂಡ್ ತಿನ್ಕೊಂಡ್ ಇರೋಕೆ ಬಿಗ್ಬಾಸ್ಗೆ ಬಂದಿದ್ಯಾ? ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ | ವಿಡಿಯೋ ನೋಡಿ



















