ಬಳ್ಳಾರಿ : ಫ್ಲೆಕ್ಸ್ ಗಲಾಟೆ, ಫೈರಿಂಗ್ ಹಾಗೂ ಕಾಂಗ್ರೆಸ್ ಕಾರ್ಯಕರ್ತನ ಸಾವಿನ ಪ್ರಕರಣ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ನಡುವೆ ಶಾಸಕ ಜನಾರ್ದನ ರೆಡ್ಡಿ, ಶಾಸಕ ಭರತ್ ರೆಡ್ಡಿ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.
ಬಳ್ಳಾರಿಯಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಸಂಪೂರ್ಣ ಘಟನೆ ಪೂರ್ವನಿಯೋಜಿತ ದಾಳಿ ಆಗಿದ್ದು, ತಮ್ಮನ್ನೇ ಗುರಿಯಾಗಿಸಿಕೊಂಡು ಎಂಟು ಸುತ್ತು ಗುಂಡು ಹಾರಿಸಲಾಗಿದೆ ಎಂದು ಆರೋಪಿಸಿ ತಮ್ಮ ನಿವಾಸದ ಬಳಿ ಪತ್ತೆಯಾದ ಮತ್ತೊಂದು ಗುಂಡನ್ನ ಪ್ರದರ್ಶನ ಮಾಡಿದ್ದಾರೆ.

ಜನಾರ್ದನ ರೆಡ್ಡಿ ಮಾತನಾಡುತ್ತಾ, ನಿನ್ನೆ ನನ್ನ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಒಂದು ಬುಲೆಟ್ ಪತ್ತೆಯಾಗಿತ್ತು. ಇಂದು ನಮ್ಮ ಹುಡುಗರಿಗೆ ಮತ್ತೊಂದು ಬುಲೆಟ್ ಸಿಕ್ಕಿದೆ. ಕಾರಿನಿಂದ ಇಳಿದ ತಕ್ಷಣ ಪೂರ್ವಯೋಜಿತವಾಗಿ ಫೈರಿಂಗ್ ಮಾಡಲಾಗಿದೆ. ಇನ್ನೂ ಉಳಿದ ಗುಂಡುಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಒಟ್ಟಾರೆ ಎಂಟು ಬಾರಿ ಶೂಟೌಟ್ ನಡೆದಿದೆ ಎಂದು ಆರೋಪಿಸಿದ್ದಾರೆ. ಹಾಗೆಯೇ ಪತ್ತೆಯಾದ ಬುಲೆಟ್‌ನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದ್ದಾರೆ.
ಈ ಹಿಂದೆ ಭರತ್ ರೆಡ್ಡಿ ತಂದೆಯ ಬಳಿ ಸುಮಾರು ಮೂರು ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಅದೇ ವ್ಯಕ್ತಿ ಶ್ರೀರಾಮುಲು ಅವರನ್ನು ಕೊಲೆ ಮಾಡಲು ಯತ್ನಿಸಿದ್ದರು. ಈಗ ಭರತ್ ರೆಡ್ಡಿ ವಾರ್ಡ್‌ವಾರ್ಡ್‌ಗಳಲ್ಲಿ ಮಟ್ಕಾ, ಡ್ರಗ್ಸ್, ಗಾಂಜಾ ಸೇರಿದಂತೆ ಅಕ್ರಮ ವ್ಯವಹಾರ ನಡೆಸುತ್ತಿದ್ದಾನೆ. ಪೊಲೀಸರಿಂದಲೂ ಹಫ್ತಾ ವಸೂಲಿ ಮಾಡುತ್ತಿದ್ದಾನೆ ಎಂದು ಜನಾರ್ದನ ರೆಡ್ಡಿಯವರು ಗಂಭೀರ ಆರೋಪ ಹೊರಿಸಿದ್ದಾರೆ. ವಾಲ್ಮೀಕಿ ಬ್ಯಾನರ್ ವಿಚಾರವನ್ನು ನೆಪವನ್ನಾಗಿ ಮಾಡಿಕೊಂಡು “ನಾನು ಹಿರೋ ಆಗಬಹುದು” ಎಂದುಕೊಂಡು ಈ ರೀತಿಯ ಗಲಾಟೆ ಹುಟ್ಟುಹಾಕಲಾಗಿದೆ. ರಾಜಕಾರಣಕ್ಕೆ ವಾಲ್ಮೀಕಿ ಹೆಸರನ್ನು ಎಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಯಾರು ತಪ್ಪಿತಸ್ಥರು ಇದ್ದಾರೆ ಅವರನ್ನ ಬಂಧಿಸಬೇಕು | ಬಳ್ಳಾರಿ ದುರಂತದ ಬಗ್ಗೆ ಕೆ ಎನ್ ರಾಜಣ್ಣ ಆಕ್ರೋಶ



















