ಬೆಳಗಾವಿ | ಬೆಳಗಾವಿಯ ಘೋಡಕೆನಟ್ಟಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಸಿಗರೇಟ್ ಹಣ ಕೇಳಿದ ಪಾನ್ ಶಾಪ್ ಮಾಲೀಕನನ್ನು ನಾಲ್ವರು ಯುವಕರು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆಯಾದ ವ್ಯಕ್ತಿಯನ್ನು ಬೋಡಕೆನಟ್ಟಿ ಗ್ರಾಮದ ಯಲ್ಲಪ್ಪ ದುರ್ಗಪ್ಪ ನಾಯಕ್(48) ಎಂದು ಗುರುತಿಸಲಾಗಿದೆ.
ಹಲ್ಲೆ ನಡೆಸಿದ ಆರೋಪಿಗಳನ್ನು ಕಡೋಲಿ ಗ್ರಾಮದ ಪ್ರಜ್ವಲ್ ರಾಮಚಂದ್ರ ಪಾಟೀಲ (22), ನಿಖಿಲ್ ಮಹೇಶ್ ಚೌಗಲೆ (22), ವಿವೇಕ್ ರಾಜೇಂದ್ರ ಚೌಗುಲೆ (22) ಹಾಗೂ ಶ್ರೀಧರ್ ರತನ ಪಾಟೀಲ (21) ಎಂದು ಗುರುತಿಸಲಾಗಿದೆ.
ಮದ್ಯದ ಅಮಲಿನಲ್ಲಿದ್ದ ನಾಲ್ವರು ಯುವಕರು ಸಿಗರೇಟ್‌ಗೆ ಹಣ ಪಾವತಿಸುವ ವಿಚಾರದಲ್ಲಿ ಪಾನ್ ಶಾಪ್ ಮಾಲೀಕನ ಜತೆ ಜಗಳ ಮಾಡಿದ್ದಾರೆ. ಈ ಜಗಳ ಅಂಗಡಿ ಮಾಲೀಕನ ಕೊಲೆಯಲ್ಲಿ ಅಂತ್ಯವಾಗಿದೆ.
ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಜಾತ್ರೆ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ನಾಲ್ವರು ಯುವಕರು ಮದ್ಯದ ಅಮಲಿನಲ್ಲಿ ಮಧ್ಯರಾತ್ರಿ ಬೋಡಕೆನಟ್ಟಿ ಗ್ರಾಮದಲ್ಲಿ ತಮ್ಮ ಬೈಕ್ ನಿಲ್ಲಿಸಿ ಸಿಗರೇಟ್ ಸೇದಲು ಮುಂದಾಗಿದ್ದಾರೆ. ಈ ವೇಳೆ ಅಂಗಡಿ ಮುಚ್ಚುತ್ತಿದ್ದ ಯಲ್ಲಪ್ಪ ನಾಯಕ್ ಅವರನ್ನು ತಡೆದು ಸಿಗರೇಟ್ ತೆಗೆದುಕೊಂಡಿದ್ದಾರೆ.
ಸಿಗರೇಟ್ ಸೇದಿದ ಬಳಿಕ ಅಂಗಡಿ ಮಾಲೀಕ ಹಣ ಕೇಳಿದಾಗ ಆರೋಪಿಗಳೊಂದಿಗೆ ಮಾತಿನ ಚಕಮಕಿ ನಡೆದಿದೆ. ಮಾತಿನ ಜಗಳವು ಶಾರೀರಿಕ ಹಲ್ಲೆಗೆ ತಿರುಗಿದ್ದು, ನಾಲ್ವರು ಯುವಕರು ಸೇರಿ ಯಲ್ಲಪ್ಪ ನಾಯಕ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಯಲ್ಲಪ್ಪ ಅವರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ನಡೆದ ಅರ್ಧ ಗಂಟೆಯೊಳಗೆ ಕಾಕತಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ : ಬಾರ್ ಲೈಸೆನ್ಸ್‌ಗೆ 60 ಲಕ್ಷ ಲಂಚಕ್ಕೆ ಬೇಡಿಕೆ ಆರೋಪ | ಅಬಕಾರಿ ಡಿಸಿ ನಾಗಶಯನ ಸಸ್ಪೆಂಡ್!



















