ಬೆಳಗಾವಿ: ಕುಂದಾನಗರಿ ಬೆಳಗಾವಿ ಅಂದ್ರೆ ರಾಜಕೀಯ ಮನೆತನಗಳ ಸಮರ. ಅದರಲ್ಲೂ ಕತ್ತಿ- ಜಾರಕಿಹೊಳಿ ಕುಟುಂಬದ ಮಧ್ಯೆ ರಾಜಕೀಯ ಜಿದ್ದಾಜಿದ್ದಿ ತೀರಾ ಸಾಮಾನ್ಯ. ಒಬ್ಬರಿಗೊಬ್ಬರು ಕತ್ತಿ ಮಸಿಯುತ್ತಾ ಆಗಾಗ್ಗೆ ಕದನದಲ್ಲಿ ಕೆಲವರು ಜಾರಿ ಬೀಳುತ್ತಲೇ ಇರುತ್ತಾರೆ. ಇದೀಗ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಮತ್ತೊಮ್ಮೆ ಬದ್ಧವೈರಿಗಳ ಕದನಕ್ಕೆ ಅಣಿಯಾಗಿದ್ದು, ಇಂದು ನಡೆದ ಡಿಸಿಸಿ ಬ್ಯಾಂಕ್ ಚುನಾವಣೆ ಶಾಂತಿಯುತವಾಗಿ ನಡೆಯಿತು.
ಬೆಳಗಾವಿ ಡಿಸಿಸಿ ಬ್ಯಾಂಕ್ ಗದ್ದುಗೆಗಾಗಿ ನಡೆದಿರುವ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್ ಹಾಗೂ ಸವದಿ ಮತ್ತು ಕತ್ತಿ ಟೀಂ ಜೊತೆಗೆ ತೀವ್ರ ಕಾದಾಟಕ್ಕೆ ಸಾಕ್ಷಿಯಾಯಿತು. ಜಾರಕಿಹೊಳಿ ಸಹೋದರರು ಒಂದು ಬಣವಾದರೇ, ಸಂಸದ ರಮೇಶ್ ಕತ್ತಿ ಹಾಗೂ ಶಾಸಕ ಲಕ್ಷ್ಮಣ ಸವದಿ, ಜಾರಕಿಹೊಳಿ ಬ್ರದರ್ಸಗೆ ತೊಡೆ ತಟ್ಟಿದ್ದಾರೆ. 7 ಕ್ಷೇತ್ರಗಳಲ್ಲಿ 2 ಕ್ಷೇತ್ರಗಳಲ್ಲಿ ಸವದಿ ಬಣ ಗೆಲುವು ಸಾಧಿಸಿದರೆ 1 ಕ್ಷೇತ್ರದಲ್ಲಿ ಜಾರಕಿಹೊಳಿ ಬಣ ಗೆಲುವು ಸಾಧಿಸಿ ಸಂಭ್ರಮಾಚರಣೆ ನಡೆಸಿದರು.
ಇಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ಮತದಾನದ ನಡುವೆ ಜಾರಕಿಹೊಳಿ ಬಣದವರು ಮತ್ತು ಸವದಿ-ಕತ್ತಿ ಬಣದ ಸದಸ್ಯರು ಕೈಕೈ ಮಿಲಾಯಿಸಿದರು. ಮತದಾರರಿಗೆ ಡೆಲಿಗೇಷನ್ ಪಾರ್ಮ್ ಕೊಡುತ್ತಿಲ್ಲ ಎಂದ ಜಾರಕಿಹೊಳಿ ಬಣದ ಅಪ್ಪಾಸಾಹೇಬ್ ಕುಲಗೋಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಡಿಸಿಪಿ ನಾರಾಯಣ ಭರಮನಿ ಚುನಾವಣಾಧಿಕಾರಿಗೆ ದೂರು ನೀಡುವಂತೆ ಸವದಿ ಬೆಂಬಲಿಗರ ಮನವೊಲಿಕೆ ಮಾಡಿದರು. ನಂತರ ಜಾರಕಿಹೊಳಿ ಬಣದ ಕಾರ್ಯಕರ್ತರ ವಿರುದ್ಧ ರಾಯಭಾಗ ಕ್ಷೇತ್ರದಿಂದ ಕಣಕ್ಕಿಳಿದಿರುವ ಬಸಗೌಡ ಆಸಂಗಿ ಕೋರ್ಟ್ ಮೆಟ್ಟಿಲೇರಿದ್ದರು.
ಇನ್ನು ಮತದಾನದ ಹಕ್ಕಿಗಾಗಿ ಪಿಕೆಪಿಎಸ್ ಸದಸ್ಯರು ಕೋರ್ಟ್ ಮೊರೆ ಹೋಗಿದ್ದರು. ಇದರಿಂದ ನಾಲ್ಕು ತಾಲೂಕಿನ ಫಲಿತಾಂಶದ ಕುರಿತು ಚುನಾವಣಾ ಫಲಿತಾಂಶವನ್ನು ಪ್ರಕಟಿಸದಂತೆ ಚುನಾವಣಾಧಿಕಾರಿಗಳಿಗೆ ಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ 4 ಕ್ಷೇತ್ರಗಳಾದ ನಿಪ್ಪಾಣಿ, ಕಿತ್ತೂರು, ಬೈಲಹೊಂಗಲ, ಹುಕ್ಕೇರಿ ಕ್ಷೇತ್ರದ ಫಲಿತಾಂಶವನ್ನು ತಡೆಹಿಡಿಯಲಾಗಿದೆ. ನ್ಯಾಯಾಲಯದಲ್ಲಿ ಚುನಾವಣಾ ಫಲಿತಾಂಶ ಘೋಷಣೆ ಮಾಡದಂತೆ ಆದೇಶ ಬರುತ್ತಿದ್ದಂತೆ ನಾಲ್ಕು ತಾಲೂಕಿನ ಅಭ್ಯರ್ಥಿಗಳು ಸಂಭ್ರಮಾಚರಣೆ ಮಾಡಿದ್ದಾರೆ.