ಬೆಂಗಳೂರು: ಫಸ್ಟ್ ರ್ಯಾಂಕ್ ರಾಜು ಸಿನಿಮಾ ಖ್ಯಾತಿಯ ಗುರುನಂದನ್ ಅಭಿನಯದ ರಾಜು ಜೇಮ್ಸ್ ಬಾಂಡ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗಷ್ಟೇ ನಡೆಯಿತು. ಈ ಕಾರ್ಯಕ್ರಮದಲ್ಲಿ ಬ್ಯೂಟಿ ಕ್ವೀನ್ ರಮ್ಯಾ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಭಾಗವಹಿಸಿದ್ದರು.
ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ನಿರ್ಮಾಣದ, ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ. ಈ ವೇಳೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, “ರಾಜು ಜೇಮ್ಸ್ ಬಾಂಡ್” ಚಿತ್ರದ ತುಣುಕು ಹಾಗೂ ಹಾಡುಗಳನ್ನು ನೋಡಿದರೆ, ಚಿತ್ರ ಯಶಸ್ವಿಯಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಚಿತ್ರ ಯಶಸ್ಸು ಕಾಣಲಿ ಎಂದು ಗೃಹ ಸಚಿವರು ಶುಭ ಕೋರಿದ್ದಾರೆ.
ನಟಿ ರಮ್ಯಾ ಮಾತನಾಡಿ, ಟ್ರೇಲರ್ ಹಾಗೂ ಹಾಡುಗಳು ತುಂಬಾ ಚೆನ್ನಾಗಿವೆ. ಛಾಯಾಗ್ರಹಣವಂತೂ ಸೂಪರ್ ಆಗಿದೆ. ಅಷ್ಟೇ ಚೆನ್ನಾಗಿ ನಾಯಕ ಹಾಗೂ ನಾಯಕಿ ಅಭಿನಯಿಸಿದ್ದಾರೆ. ಪ್ರೇಮಿಗಳ ದಿನದಂದು ಬಿಡುಗಡೆಯಾಗುತ್ತಿರುವ ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಈ ಚಿತ್ರ ಫೆಬ್ರವರಿ 14ರಂದು ತೆರೆಗೆ ಬರಲಿದೆ. ನಾಯಕಿಯಾಗಿ ಮೃದುಲ ನಟಿಸಿದ್ದಾರೆ. ನಟ ತಬಲ ನಾಣಿ, ಸಾಧುಕೋಕಿಲ, ಅಚ್ಯುತ್ ಕುಮಾರ್, ರವಿಶಂಕರ್, ಜೈ ಜಗದೀಶ್ ಸೇರಿದಂತೆ ಹಲವರು ನಟಿಸಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಅಮಿತ್ ಚವಳ್ಕರ್ ಅವರ ಸಂಕಲನವಿರುವ ಚಿತ್ರಕ್ಕೆ ಜಗದೀಶ್ ನಡನಹಳ್ಳಿ ಸಂಭಾಷಣೆ ಬರೆದಿದ್ದಾರೆ. ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ವೆಂಕಟೇಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಿರ್ಮಾಪಕರಾದ ರಮೇಶ್ ರೆಡ್ಡಿ, ಸಂಜಯ್ ಗೌಡ, ನಾಯಕಿ ತಪಸ್ವಿನಿ ಶರ್ಮ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿದ್ದರು.