ಇತ್ತೀಚಿಗೆ ನಡೆದ ಅಂಕೊಲ ಶಿರೂರಿನ ಗುಡ್ಡ ಕುಸಿತದ ಪರಿಣಾಮ, ಮಣ್ಣಿನಡಿ ಸಿಲುಕಿ ಸತ್ತವರ ಸುದ್ದಿ ಮಾಸುವ ಮೊದಲೇ, ಮತ್ತೊಂದು ಅನಾಹುತದ ಮುನ್ಸೂಚನೆ ಹೊತ್ತ ಗುಡ್ಡ ಕುಸಿತದ ಸುದ್ದಿ ನಮ್ಮನ್ನು ತಲುಪಿಕೊಂಡಿದೆ. ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳದೇ ಹೋದಲ್ಲಿ ಅಂಕೋಲದ ದುರ್ಘಟನೆಗೂ ಮೀರಿ ಮತ್ತೊಂದು ಅನಾಹುತಕ್ಕೆ ದಾರಿ ಮಾಡಿಕೊಟ್ಟಾಂತಾಗುತ್ತದೆ.

ಹೌದು, ಬೈಂದೂರು ತಾಲೂಕಿನ ಶಿರೂರು ಪಡುವರಿ ಬಳಿಯ ದೊಂಬೆ ಎಂಬ ಊರಿನಲ್ಲಿ ಭಾರೀ ಗುಡ್ಡ ಕುಸಿತದ ಮುನ್ಸೂಚನೆ ಸಿಕ್ಕಿದೆ. ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ, ಅಡ್ಡಕಸುಬಿಗಳ ಹಾಳು ದಂಧೆಯ ಪರಿಣಾಮ, ಮಣ್ಣುಹೊತ್ತ ಗುಡ್ಡ ದಿನದಿಂದ-ದಿನಕ್ಕೆ ಕುಸಿದುಕೊಳ್ಳುತ್ತಿದೆ. ಮಣ್ಣು ಗುಡ್ಡೆ ಜಾರುತ್ತಾ, ಜನರಲ್ಲಿ ಆತಂಕ ಮೂಡಿಸಿದೆ. ನಿರಂತರ ಮಳೆ ಒಂದೆಡೆಯಾದರೆ, ಎಗ್ಗಿಲ್ಲದೇ ಸಾಗಿರುವ ಗುಡ್ಡದ ಮೇಲಿನ ಕಟ್ಟಡ ಕಾಮಗಾರಿಯು ಗುಡ್ಡ ಕುಸಿತಕ್ಕೆ ನೇರ ಕಾರಣವಾಗುತ್ತಿದೆ. ಅಸಲಿಗೆ ಅದು ಬೈಂದೂರಿನಿಂದ ಶಿರೂರು ಮಾರ್ಗ ಮಧ್ಯದ ಕವಲುದಾರಿಯಲ್ಲಿನ ದೊಂಬೆ ಎಂಬ ಊರಿನ ಗುಡ್ಡಗಾಡು. ಅಲ್ಲಿ ಇಪ್ಪತ್ತರಿಂದ ಮೂವತ್ತು ಮನೆಗಳಿದ್ದು, ಈ ಗುಡ್ಡ ಕುಸಿತದ ಭಯಕ್ಕೆ ದಿನಾಲೂ ಇಲ್ಲಿನ ವಾಸಿಗಳು ರಸ್ತೆಯಲ್ಲಿ ಜೀವ ಪಣಕ್ಕಿಟ್ಟು ಓಡಾಡುವ ಪರಿಸ್ಥಿತಿ ಇದೆ. ನಿಜಕ್ಕೂ ಮೊನ್ನೆ ಅಂಕೋಲಾದಲ್ಲಿ ಗುಡ್ಡ ಕುಸಿತದ ದುರ್ಘಟನೆ ನಡೆದ ಘಳಿಗೆಯಿಂದ ಈ ಜನರಲ್ಲಿ ಭಯ, ಆತಂಕ ಮತ್ತಷ್ಟು ಹೆಚ್ಚಾಗಿಹೋಗಿದೆ. ಅಲ್ಲಿನ ಸಾವು-ನೋವು ಈ ಗ್ರಾಮ ವಾಸಿಗಳನ್ನ ಭಯ-ಭೀತರನ್ನಾಗಿಸಿದೆ. ಈ ನಡುವೆ ಅಲ್ಲೊಂದು ಭಾರೀ ಕಟ್ಟಡ ತಲೆ ಎತ್ತುತ್ತಿದ್ದು, ಇದರ ನಿರಂತರ ಕಾಮಗಾರಿ ಕಾರಣದಿಂದ ಸದ್ಯ ಗುಡ್ಡದ ಕುಸಿತ ಹೆಚ್ಚಾಗಿರುವುದು ಎಂಬುದು ಸ್ಥಳೀಯರ ಕೂಗಾಗಿದೆ.

ಗುಡ್ಡದ ಮೇಲೆ “ರೆಸಾರ್ಟ್” ನಿರ್ಮಿಸಲಾಗುತ್ತಿದ್ದು, ಈ ಕಟ್ಟಡದ ಕಾಮಗಾರಿ ಪ್ರಾರಂಭವಾದಾಗಿನಿಂದಲೂ, ಗುಡ್ಡ ಹೆಚ್ಚು ಶಿತಿಲಗೊಳ್ಳತೊಡಗಿದೆ ಎನ್ನಲಾಗಿದೆ. ಈ ಮೊದಲು ಹೈವೇ ನಿರ್ಮಾಣದ ಸಮಯಕ್ಕೆ ‘ಐಆರ್ ಬಿ’ ಕಂಪೆನಿಯವರು ಮಾಡಿದ ಹಾಳುಗಳಿಗೆ, ಕರಾವಳಿಯ ಬೇರೆಡೆಯಂತೆಯೇ ಇಲ್ಲಿಯೂ ಸಮಸ್ಯೆ ಪ್ರಾರಂಭವಾಗಿತ್ತು. ಇದೀಗ ಈ ರೆಸಾರ್ಟಿನವರು ರಸ್ತೆ ನಿರ್ಮಿಸುವ ಸಲುವಾಗಿ ಗುಡ್ಡದ ಸುತ್ತಲೂ ತಮಗೆ ಬೇಕಾದಂತೆ ಕೊರೆದು ಹಾಳುಗೆಡವಿದ್ದಾರೆ. ಅಸಲಿಗೆ ಈ ಅಪಾಯಕಾರಿ ಮುನ್ಸೂಚನೆ ಹೊತ್ತ ಗುಡ್ಡದ ಮೇಲೆ ಬೃಹತ್ತಾಗಿ ರೆಸಾರ್ಟ್ ನಿರ್ಮಿಸಲು ಹೊರಟಿರುವ ಕಟ್ಟಡದ ಕಂಪೆನಿಗೆ ಅನುಮತಿ ಸಿಕ್ಕಿದ್ದರಲ್ಲೇ ಅನುಮಾನವಿದೆ. ಬೈಂದೂರು ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ಈ ಗುಡ್ಡದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಿಸುತ್ತಿರುವವರಿಗೆ, ಪ್ರಾಧಿಕಾರದವರಾಗಲಿ, ಪಟ್ಟಣ ಪಂಚಾಯತ್ ಆಗಲಿ ಸಮ್ಮತಿ ಕೊಟ್ಟಿದ್ದಾದರೂ ಹೇಗೆ? ಒತ್ತಡ ಹಾಕಿದ್ದಾದರೂ ಯಾರು? ಈ ಬಗ್ಗೆ ಜನ ಕಂಪ್ಲೆಂಟು ಕೊಟ್ಟರೂ ಫಲ ಸಿಗದ ಮಟ್ಟಿಗೆ ಆಟವಾಡುತ್ತಿರುವ ಕಾಣದ ಕೈಗಳಾದರೂ ಯಾವುದು? ಎಲ್ಲವನ್ನೂ ನಿಭಾಯಿಸುತ್ತಿರುವ ಆ ಕಟ್ಟಡ ಕಂಪೆನಿಯ ಶಕ್ತಿಯಾದರೂ ಎಂಥದ್ದು? ಈ ಬಗ್ಗೆ ಸ್ಪಷ್ಟ ತನಿಖೆಯಾಗಿ ಕ್ರಮವಾಗಬೇಕಿದೆ. ಅನಾಮತ್ತು ಒಂದಷ್ಟು ಜನರ ಪ್ರಾಣ ಬೀದಿಯಲ್ಲಿ ಬೀಳುವ ಮೊದಲೇ ಇವೆಲ್ಲದಕ್ಕೂ ಉತ್ತರ ಸಿಗಬೇಕಿದೆ. ಒಟ್ಟಿನಲ್ಲಿ “ಆಕರ್ಷಣೀಯ ಬೃಹತ್ ರೆಸಾರ್ಟ್ ಕಟ್ಟಿ, ಪ್ರವಾಸಿಗರಿಗೆ ಸಮುದ್ರ ವ್ಯೂವ್ ತೋರಿಸಲು ಹೊರಟು, ದಾರಿಹೋಕರಿಗೆ, ಊರ ನಿವಾಸಿಗಳಿಗೆ ಯಮನ ರೂಟು ತೋರಿಸಿಯಾರು” ಎಂಬ ಆತಂಕ ಜನರಲ್ಲಿ ಕಾಡತೊಡಗಿದೆ. ಈ ಬಗ್ಗೆ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
