ಬೆಂಗಳೂರು: ಹೊಸ ವರ್ಷವನ್ನು ಸ್ವಾಗತಿಸಲು ಇಡೀ ಜಗತ್ತೇ ಸಿದ್ಧವಾಗಿ ನಿಂತಿದೆ. ಈ ವೇಳೆ ಮದ್ಯ ಹಾಗೂ ಡ್ರಗ್ಸ್ ಸೇವಿಸಿ ಅಸಭ್ಯ ವರ್ತನೆ ತೋರಿಸುವವರ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ.
ಹೊಸ ವರ್ಷದ ಹಿನ್ನೆಲೆಯಲ್ಲಿ ರೆಸ್ಟೋರೆಂಟ್ ಮತ್ತು ಪಬ್ ಗಳು ಹೊಸ ವರ್ಷಕ್ಕೆ ಆಫರ್ ಗಳನ್ನು ನೀಡಲು ಮುಂದಾಗಿವೆ. ಎಂಜಿ ರೋಡ್, ಬ್ರಿಗೇಡ್ ರೋಡ್ ಮತ್ತು ಕೋರಮಂಗಲದ ಪಬ್ ಗಳಲ್ಲಿ ಪಾರ್ಟಿ ಮಾಡಿ, ನಶೆಯಲ್ಲಿ ಹೊಸ ವರ್ಷ ಸ್ವಾಗತಿಸಲು ಹಲವರು ಮುಂದಾಗಿದ್ದಾರೆ. ಆದರೆ, ಪೊಲೀಸರು ಇದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ.
ಬೆಂಗಳೂರು ನಗರ ಪೊಲೀಸರು ಮತ್ತು ಸಿಸಿಬಿ ಪೊಲೀಸರು ಡ್ರಗ್ಸ್ ಜಾಲದ ಮೇಲೆ ಕಣ್ಣಿಟ್ಟಿದ್ದು, ಈಗಾಗಲೆ ಹಲವು ಕಡೆ ದಾಳಿ ಮಾಡಿ, ಕೋಟ್ಯಾಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಾದಕ ವಸ್ತು ಅಥವಾ ಮದ್ಯಪಾನ ಮಾಡಿ ರಸ್ತೆಗಳಲ್ಲಿ ಸುತ್ತಾಡುವರನ್ನು ಪತ್ತೆ ಹಚ್ಚಲು ಪೊಲೀಸರು ತಪಾಸಣಾ ಕಿಟ್ ಸಿದ್ಧಪಡಿಸಿದ್ದಾರೆ.
ಹೊಸ ವರ್ಷ ಸಂಭ್ರಮಾಚರಣೆಯ ಒಂದು ವಾರಕ್ಕೂ ಮೊದಲು ತಪಾಸಣೆ ಆರಂಭಿಸಲು ಮುಂದಾಗಿದ್ದಾರೆ. ಅನುಮಾನ ಬಂದವರನ್ನು ತಪಾಸಣೆಗೆ ಒಳಪಡಿಸುತ್ತಾರೆ. ಈ ಕಿಟ್ನಿಂದ ಕ್ಷಣಾರ್ಧದಲ್ಲೇ ವರದಿ ಬರಲಿದೆ. ಈ ತಪಾಸಣಾ ಕಿಟ್ ಏಕಕಾಲದಲ್ಲಿ ಆರು ಟೆಸ್ಟಿಂಗ್ ರಿಪೋರ್ಟ್ ನೀಡುತ್ತದೆ. ಮೆತ್ ಆಂಫೆಟಮೈನ್, ಕೊಕೇನ್, ಓಪಿಐಓಡಿಎಸ್ ಸೇರಿದಂತೆ ಆರು ಮಾದಕ ದ್ರವ್ಯಗಳನ್ನು ತಪಾಸಣೆ ನಡೆಸಲಿದೆ. ಇದು ಮಧ್ಯಪಾನ ಸೇರಿದಂತೆ ಗಾಂಜಾಸೇವನೆ, ಡ್ರಗ್ ಸೇವನೆ ವರದಿ ನೀಡಲಿದೆ.
21 ವರ್ಷದ ಒಳಗಿರುವ ಯುವಕ, ಯುವತಿಯರ ಮೇಲೆ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. 21 ವರ್ಷದ ಒಳಗಿನ ಯುವಕ, ಯುವತಿಯರು ಪಬ್ ಅಥವಾ ಬಾರ್ ಗೆ ಪ್ರವೇಶಿಸಿದರೆ ಮಾಲೀಕರ ವಿರುದ್ಧವೇ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.