ರಾಜ್ಯಕ್ಕೆ ಸರಬರಾಜಾಗುತ್ತಿರುವ ಫಾರ್ಮಾ ಕಂಪನಿಯೊಂದರ ಗ್ಲುಕೋಸ್ ಬಾಟಲಿಯಲ್ಲಿ ಕೊಳೆತ ನಾರಿನಾಂಶ ಪತ್ತೆಯಾಗಿದೆ.
ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಮೊದಲು ವೈದ್ಯರು ಗ್ಲುಕೋಸ್ ನೀಡುತ್ತಾರೆ. ಆದರೆ, ಈ ಗ್ಲಕೋಸ್ ಕೂಡ ಈಗ ಆರೋಗ್ಯವಾಗಿಲ್ಲ ಎಂಬುವುದು ಖಚಿತವಾಗಿದ್ದು, ರೋಗಿಗಳು ಆತಂಕ ವ್ಯಕ್ತಪಡಿಸುವಂತಾಗಿದೆ. ಈ ಅನಾರೋಗ್ಯಯುಕ್ತ ಗ್ಲುಕೋಸ್ ನ್ನು ರೋಗಿಗೆ ಹಾಕಿದರೆ, ಮತ್ತಷ್ಟು ಆರೋಗ್ಯ ಹದಗೆಡುವುದು ಶತಸಿದ್ಧ. ಈ ಹಿನ್ನೆಲೆಯಲ್ಲಿ ಔಷಧಿ ಗುಣಮಟ್ಟ ಇಲಾಖೆಯಿಂದ ರಾಜ್ಯಕ್ಕೆ ಎಚ್ಚರಿಕೆ ಸಂದೇಶ ನೀಡಲಾಗಿದೆ.
ಔಷಧಿ ಗುಣಮಟ್ಟ ಇಲಾಖೆಯು ರಾಜ್ಯದ ಎಲ್ಲ ಆಸ್ಪತ್ರೆಗಳಿಗೂ ತುರ್ತು ಸಂದೇಶ ನೀಡಿದ್ದು, 26.2.9 ringer lactate infusion FFS ಬಳಸದಂತೆ ಮಾಹಿತಿ ನೀಡಲಾಗಿದೆ. ಗ್ಲುಕೋಸ್ ಬಾಟಲಿಯಲ್ಲಿ ಕಪ್ಪು ಬಣ್ಣದ ಫಂಗಸ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಬಳಸದಂತೆ ಸೂಚಿಸಲಾಗಿದೆ. ಹೀಗಾಗಿ ಈ ಗ್ಲುಕೋಸ್ ಸಿದ್ಧಪಡಿಸುವ PASCHIM BANGA PHARMACETICAL ಕಂಪನಿಯನ್ನು ಬ್ಲಾಕ್ ಲಿಸ್ಟ್ ಗೆ ಹಾಕಲು ಸೂಚಿಸಲಾಗಿದ್ದು, ಈ ಕುರಿತು ತನಿಖೆಗೆ ನಡೆಸುವಂತೆ ಹೇಳಲಾಗಿದೆ.
ಈಗಾಗಲೇ ಸರಬರಾಜಾಗಿರುವ ಮೆಡಿಕಲ್ ಸ್ಟೋರ್, ಆಸ್ಪತ್ರೆಗಳಲ್ಲಿ ಶೇಖರಣೆ ಮಾಡದಂತೆ ಹಾಗೂ ಈ ಗ್ಲುಕೋಸ್ ಗಳ ಬಾಟಲಿಗಳನ್ನು ಔಷಧಿ ಉಗ್ರಾಣಗಳಿಗೆ ಹಿಂತಿರುಗಿಸುವಂತೆ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.