ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತಾಪಮಾನ ಕುಸಿತವಾಗುತ್ತಿದ್ದು, ಚಳಿಯ ಅನುಭವ ಹೆಚ್ಚಾಗಲಿದೆ.
ಈಗಾಗಲೇ ಬೆಂಗಳೂರಿನ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು 15.5 ° C ಮತ್ತು 16 ° C ನಡುವೆ ದಾಖಲಾಗುತ್ತಿದೆ. ಇದು ಚಳಿಗಾಲದ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ತಾಪಮಾನ ಇನ್ನೂ ಕಡಿಮೆಯಾಗಲಿದೆ. ಹೀಗಾಗಿ ಚಳಿಯ ಅನುಭವ ಹೆಚ್ಚಾಗಲಿದೆ.
ನಗರದಲ್ಲಿ 12 ಡಿಗ್ರಿಗೆ ತಾಪಮಾನ ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಅಲ್ಲದೇ, ಈಗಾಗಲೇ ಚಳಿ ಹೆಚ್ಚಿದ್ದು, ಡಿಸೆಂಬರ್ ಜನವರಿಗೆ ಇನ್ನು ಹೆಚ್ಚಾಗುವ ಎಚ್ಚರಿಕೆಯನ್ನು ನೀಡಿದೆ. ಲಾನಿನೋ ಸ್ಥಿತಿಯಿಂದಾಗಿ ರಾಜ್ಯದಲ್ಲಿ ಈ ಬಾರಿ ಚಳಿ ಪ್ರಮಾಣ ತೀವ್ರವಾಗಿರುವ ಮುನ್ಸೂಚನೆ ಸಿಕ್ಕಿದ್ದು, ಪೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗುವ ಮುನ್ಸೂಚನೆ ಇದೆ.
ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚು ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.