ಬೆಂಗಳೂರು: ಈಗ ಎಲ್ಲೆಲ್ಲೂ ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜ ಮಾವಿನ ದರ್ಬಾರ್ ನಡೆಯುತ್ತಿದೆ. ಆದರೆ, ಈ ಹಣ್ಣು ಕೊಳ್ಳುವ ಮುನ್ನ ಮಾವು ಪ್ರಿಯರು ಹುಷಾಗಿರಬೇಕಾದ ಸುದ್ದಿಯೊಂದು ಹೊರ ಬಿದ್ದಿದೆ.
ಬಾದಾಮಿ, ಸಿಂಧೂರ, ರಸಪುರ, ಬೈಗಂಪಲ್ಲಿ, ಕೇಸರ್, ಮಲ್ಲಿಕಾ, ಇಮಾಮ್ ಪಸಂದ್, ಮಲಗೋ ಶುಗರ್ ಬೇಬಿ ಸೇರಿದಂತೆ ಹಲಾವರು ಬಗೆಯ ತಳಿಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ನೋಡಲು ಚೆನ್ನಾಗಿ ಕಾಣುತ್ತಿದೆ. ದಪ್ಪಾಗಿ ಕಾಣುತ್ತಿದೆ. ರುಚಿ ಇರಬಹುದು ಎಂದು ತಿಂದರೆ ಪಕ್ಕಾ ಆರೋಗ್ಯ ಕೈ ಕೊಡುತ್ತದೆ. ಕಾರಣ, ರಾಸಾಯನಿಕಗಳನ್ನು ಬಳಸಿ ಮಾವನ್ನು ಹಣ್ಣಗಿಸುತ್ತಿದ್ದಾರೆಂಬ ಆತಂಕಕಾರಿ ವಿಷಯ ಹೊರ ಬಿದ್ದಿದೆ.
ಹಣ್ಣನ್ನು ಮಾಗಿಸಲು ಅನೇಕ ರಾಸಾಯನಿಕಗಳನ್ನು ಬಳಸಲಾಗುತ್ತಿದೆ ಎಂಬ ಆರೋಪಗಳಿದ್ದು, ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ರಾಸಾಯನಿಕಗಳಿಂದ ಹಣ್ಣಾದ ಮಾವು ಸೇವನೆಯಿಂದ ಗಂಟಲು ಕೆರೆತ, ತುರಿಕೆ, ಚರ್ಮದ ಸಮಸ್ಯೆ, ಅಲರ್ಜಿಯಿಂದ ಹಿಡಿದು ದೀರ್ಘಕಾಲಿಕ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ಆರೋಗ್ಯ ಇಲಾಖೆ ಈ ಕುರಿತು ಎಚ್ಚೆತ್ತು ಸಾರ್ವಜನಿಕರಿಗೆ ಸಲಹೆ ನೀಡಬೇಕಿದೆ.



















