ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಗುತ್ತಿಗೆ ನೀಡಿರುವ ಆದೇಶ ರದ್ದು ಮಾಡಬೇಕೆಂದು ಆಗ್ರಹಿಸಿ ಸೆ. 12ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಬಿಡಿಎ ಕಾಂಪ್ಲೆಕ್ಸ್ ಉಳಿಸಿ ಹೋರಾಟ ಸಮಿತಿಯ ಸದಸ್ಯರು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸದಸ್ಯರು, ಬಿಡಿಎ ಕಾಂಪ್ಲೆಕ್ಸ್ ಉಳಿಸಿ ಹೋರಾಟ ಸಮಿತಿ, ಆಮ್ ಆದ್ಮಿ ಪಕ್ಷ, ಸಿ ಸಿಐ(ಎಂ) ರಾಜ್ಯ ಸಮಿತಿ ಸದಸ್ಯರಿಂದ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದ್ದಾರೆ.
ಬೆಂಗಳೂರು ನಗರದ ಏಳು ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಮರು ನಿರ್ಮಾಣ ಮಾಡುವ ನೆಪದಲ್ಲಿ ಖಾಸಗಿ ಕಂಪನಿಗಳಿಗೆ ನೀಡಲು ತೀರ್ಮಾನಿಸಲಾಗಿದೆ. ಇಂದಿರಾ ನಗರ ವಾಣಿಜ್ಯ ಸಂಕೀರ್ಣವನ್ನು Mavrick Holidings Investments Pvt. Ltd ಕಂಪನಿಗೆ, ಕೋರಮಂಗಲ, ಹೆಚ್.ಎಸ್.ಆರ್. ಬಡಾವಣೆ, ಆರ್.ಟಿ.ನಗರ, ಆಸ್ಟಿನ್ ಟೌನ್, ಸದಾಶಿವನಗರ ಮತ್ತು ವಿಜಯ ನಗರ ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು M-FAR Developers Pvt Ltd ಕಂಪನಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಮರು ನಿರ್ಮಾಣ ಮಾಡಲು ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. ಹೀಗಾಗಿ ಈ ಕಂಪನಿಗಳು ಸದ್ಯ ಇರುವ ಕಾಂಪ್ಲೆಕ್ಸ್ ಗಳನ್ನು ಕೆಡವಿ ಅದೇ ಜಾಗದಲ್ಲಿ ಬಹು ಮಹಡಿ ಶಾಪಿಂಗ್ ಕಾಂಪ್ಲೆಕ್ಸ್ ಗಳನ್ನು ನಿರ್ಮಾಣ ಮಾಡಲಿವೆ. ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಅಡಗಿದೆ ಎಂದು ಸದಸ್ಯರು ಆರೋಪಿಸಿದ್ದಾರೆ.
ಈ ಏಳೂ ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಟೆಂಡರ್ ಪಡೆದ ಖಾಸಗಿ ಕಂಪನಿಗಳು ಮರು ನಿರ್ಮಾಣ ಮಾಡಿದ ನಂತರ 65:35 ಅನುಪಾತದಲ್ಲಿ 30 ವರ್ಷಕ್ಕೆ ಗುತ್ತಿಗೆ ನೀಡುವ ಕುರಿತು ಅಂದರೆ, ಮುಂದಿನ 30 ವರ್ಷಕ್ಕೆ ಗುತ್ತಿಗೆ ಅವಧಿಯನ್ನು ವಿಸ್ತರಿಸಲು ಕರಾರಿನಲ್ಲಿ ಅವಕಾಶ ಕಲ್ಪಿಸಿಕೊಂಡಿವೆ.
ಆದರೆ, ಈ ರೀತಿ ಕಂಪನಿಗಳಿಗೆ ನೀಡುವುದನ್ನು ಬಿಟ್ಟು ಬಿಡಿಎ ಕಾಂಪ್ಲೆಕ್ಸ್ ಗಳನ್ನು ಒಡೆದು ಕಟ್ಟುವ ಉದ್ದೇಶವಿದ್ದಲ್ಲಿ, ಈ ಕಟ್ಟಡಗಳನ್ನು ಬಿಡಿಎ ನಿರ್ಮಿಸಬಹುದು. ಈ ಯೋಜನೆಗೆ ಬ್ಯಾಂಕ್ ಸಾಲವೂ ಸುಲಭವಾಗಿ ಸಿಗಲಿದೆ. ಇದರಿಂದ ಬಿಡಿಎಗೆ ಆದಾಯವೂ ವೃದ್ಧಿಯಾಗಲಿದೆ. ಇಷ್ಟೆಲ್ಲ ಅವಕಾಶಗಳಿದ್ದರೂ ಖಾಸಗಿ ಕಂಪನಿಗಳಿಗೆ ಈ ರೀತಿ ಒಪ್ಪಂದದ ಆಧಾರದಲ್ಲಿ ನೀಡುವುದು ಸರಿಯಲ್ಲ. ಇದರಿಂದ ಸಾರ್ವಜನಿಕರ ಆಸ್ತಿಗೆ ಧಕ್ಕೆಯಾಗಲಿದೆ.
ಸರ್ಕಾರಕ್ಕೂ ನಷ್ಟಾಗವಾಗಲಿದೆ. ಮೇಲ್ನೋಟಕ್ಕೆ ಗಮನಿಸಿದರೆ, ಸಾವಿರಾರು ಕೋಟಿ ಬೆಲೆ ಬಾಳುವ ಕಟ್ಟಡಗಳನ್ನು ಹೀಗೆ ಖಾಸಗಿ ಕಂಪನಿಗಳ ಹಿಡಿತಕ್ಕೆ ನೀಡುವುದರ ಹಿಂದೆ ಯಾವುದೋ ಹಿತಾಸಕ್ತಿ ಅಡಗಿದೆ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಕೂಡಲೇ ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕೆಂದು ಆಗ್ರಹಿಸಿ ಪ್ರತಿಭಟಿಸಲಾಗುವುದು ಎಂದು ಸದಸ್ಯರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿ ಮುಖ್ಯಸ್ಥ ಆರ್. ನಾಗೇಶ್, ಸಿಪಿಐ (ಎಂ) ರಾಜ್ಯ ಸಮಿತಿ ಸದಸ್ಯರಾದ ಗೌರಮ್ಮ, ಆಮ್ ಆದ್ಮಿ ಪಕ್ಷದ ಮುಖಂಡ ಅನಿಲ್ ನಾಚಪ್ಪ, ಮುಖಂಡ ನಜೀಬ್ ಎಂ ಎ , ಬಹುಜನ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಆರ್. ಎಂ.ಎನ್ ರಮೇಶ್, ಕರವೇ ಗಜಸೇನೆ ರಾಜ್ಯಾಧ್ಯಕ್ಷ ತಾಯ್ನಾಡು ರಾಘವೇಂದ್ರ, ಬಿಡಿಎ ಕಾಂಪ್ಲೆಕ್ಸ್ ಉಳಿಸಿ ಹೋರಾಟ ಸಮಿತಿ ಸಂಚಾಲಕ ಲಿಂಗರಾಜು ಸೇರಿದಂತೆ ಹಲವರು ಇದ್ದರು.