ದುಬೈ/ನವದೆಹಲಿ: ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಎದುರಾಗಿರುವ ಅನಿಶ್ಚಿತತೆ ಮತ್ತು ಬಾಂಗ್ಲಾದೇಶ, ಪಾಕಿಸ್ತಾನ ತಂಡಗಳ ಅಸಮಾಧಾನಕ್ಕೆ ಬಿಸಿಸಿಐ (BCCI) ತೆಗೆದುಕೊಂಡ ಒಂದು “ಅವಿವೇಕದ ನಿರ್ಧಾರ”ವೇ ಕಾರಣ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಮಾಜಿ ಮಾಧ್ಯಮ ನಿರ್ದೇಶಕ ಸಮಿ-ಉಲ್-ಹಸನ್ ಬರ್ನಿ ಆರೋಪಿಸಿದ್ದಾರೆ.
ಕೋಲ್ಕತಾ ನೈಟ್ ರೈಡರ್ಸ್ (KKR) ತಂಡದಿಂದ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೈಬಿಡುವಂತೆ ಬಿಸಿಸಿಐ ಸಾರ್ವಜನಿಕವಾಗಿ ನೀಡಿದ ಸೂಚನೆಯೇ ಇಂದಿನ ಎಲ್ಲಾ ಅವಾಂತರಗಳಿಗೆ ಮೂಲ ಕಾರಣ ಎಂದು ಅವರು ವಿಶ್ಲೇಷಿಸಿದ್ದಾರೆ.
ಬೆಂಕಿಗೆ ತುಪ್ಪ ಸುರಿದ ಆ ಒಂದು ಹೇಳಿಕೆ!
ಜನವರಿ 3ರಂದು ಬಿಸಿಸಿಐ ನೀಡಿದ ನಿರ್ದೇಶನದ ಮೇರೆಗೆ ಕೆಕೆಆರ್ ತಂಡ ಮುಸ್ತಾಫಿಜುರ್ ಅವರನ್ನು ಬಿಡುಗಡೆ ಮಾಡಿತ್ತು. ಇದನ್ನು ಬರ್ನಿ ಅವರು ‘ಜಡ್ಜ್‌ಮೆಂಟ್ ಎರರ್’ (ತೀರ್ಮಾನದ ದೋಷ) ಎಂದು ಕರೆದಿದ್ದಾರೆ. “ಬಿಸಿಸಿಐ ಈ ವಿಷಯವನ್ನು ಸಾರ್ವಜನಿಕವಾಗಿ ಘೋಷಿಸುವ ಅಗತ್ಯವಿರಲಿಲ್ಲ. ಫ್ರಾಂಚೈಸಿಗೆ ಖಾಸಗಿಯಾಗಿ ಮಾಹಿತಿ ನೀಡಿ, ಆಟಗಾರನನ್ನು ಬಿಡುಗಡೆ ಮಾಡಿಸಬಹುದಿತ್ತು. ಆಗ ಈ ವಿಷಯ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ,” ಎಂದು ಬರ್ನಿ ಅಭಿಪ್ರಾಯಪಟ್ಟಿದ್ದಾರೆ.
ಈ ಘಟನೆಯ ಸರಪಳಿ ಪರಿಣಾಮವಾಗಿ, “ಭದ್ರತಾ ಕಾರಣ”ಗಳನ್ನು ನೀಡಿ ಬಾಂಗ್ಲಾದೇಶ ತಂಡವು ಭಾರತದಲ್ಲಿ ಪಂದ್ಯ ಆಡಲು ನಿರಾಕರಿಸಿ ಟೂರ್ನಿಯಿಂದ ಹಿಂದೆ ಸರಿಯಿತು. ಇದೀಗ ಪಾಕಿಸ್ತಾನ ಕೂಡ ಫೆಬ್ರವರಿ 15ರಂದು ಭಾರತದ ವಿರುದ್ಧ ನಡೆಯಬೇಕಿದ್ದ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದೆ.
ಐಸಿಸಿ ಇಬ್ಬಗೆ ನೀತಿ?
ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಆಲೋಚನೆಯ ಬಗ್ಗೆಯೂ ಬರ್ನಿ ಬೆಳಕು ಚೆಲ್ಲಿದ್ದಾರೆ. ನವೆಂಬರ್ 2024ರಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲು ಅಲ್ಲಿನ ಸರ್ಕಾರ ಅನುಮತಿ ನೀಡಿಲ್ಲ ಎಂದು ಐಸಿಸಿ ಹೇಳಿತ್ತು. ಆದರೆ, ಈಗ ಬಾಂಗ್ಲಾದೇಶ ವಿಷಯದಲ್ಲಿ ಅದೇ ನಿಯಮ ಅನ್ವಯಿಸಿಲ್ಲ. ಬಾಂಗ್ಲಾ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಐಸಿಸಿ ನಿರಾಕರಿಸಿದ್ದು, ಇದು ದ್ವಂದ್ವ ನೀತಿ (Double Standards) ಎಂದು ಪಾಕಿಸ್ತಾನ ಭಾವಿಸಿದೆ.
ಆರ್ಥಿಕ ನಷ್ಟಕ್ಕೆ ಪಾಕ್ ಸಿದ್ಧ?
ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದರಿಂದ ಸುಮಾರು 250 ಮಿಲಿಯನ್ ಡಾಲರ್ (2,200 ಕೋಟಿ ರೂ.) ನಷ್ಟವಾಗಬಹುದು ಎಂಬ ಅಂದಾಜಿದೆ. ಆದರೆ, ಪಾಕಿಸ್ತಾನ ಈ ಪರಿಣಾಮಗಳನ್ನು ಎದುರಿಸಲು ಸಿದ್ಧವಿದ್ದಂತಿದೆ. “ಪಾಕಿಸ್ತಾನದ ವಾರ್ಷಿಕ ಆದಾಯ ಕೇವಲ 35.5 ಮಿಲಿಯನ್ ಡಾಲರ್ ಇರಬಹುದು. ಆದರೆ, ಈ ಹಿಂದೆಯೂ ಅವರು ದ್ವಿಪಕ್ಷೀಯ ಸರಣಿಗಳಿಲ್ಲದೆ ಮತ್ತು ತಟಸ್ಥ ಸ್ಥಳಗಳಲ್ಲಿ ಆಡಿಯೇ ಚಾಂಪಿಯನ್ಸ್ ಟ್ರೋಫಿ ಮತ್ತು ಟಿ20 ವಿಶ್ವಕಪ್ ಗೆದ್ದಿದ್ದಾರೆ. ಆರ್ಥಿಕ ಒತ್ತಡಗಳನ್ನು ನಿಭಾಯಿಸುವ ಶಕ್ತಿ ಪಿಸಿಬಿಗೆ ಇದೆ,” ಎಂದು ಬರ್ನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಸಿಸಿಎಲ್ 2026 | ಕಿಚ್ಚನ ಪಡೆಗೆ ಭರ್ಜರಿ ಗೆಲುವು



















