ಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಾರ್ಚ್ 22ರಂದು ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಋತುವಿನ ಮೊದಲ ಪಂದ್ಯಕ್ಕೂ ಮುನ್ನ, ಮಾರ್ಚ್ 20ರಂದು ಗುರುವಾರ ಮುಂಬೈನ ಕ್ರಿಕೆಟ್ ಸೆಂಟರ್‌ನಲ್ಲಿ ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳ ನಾಯಕರನ್ನು ಆಹ್ವಾನಿಸಿ ಮಹತ್ವದ ಸಭೆ ಕರೆದಿದೆ.
ಕ್ರಿಕ್ಬಜ್ ವರದಿ ಪ್ರಕಾರ, 10 ತಂಡಗಳ ನಾಯಕರ ಜೊತೆಗೆ ಪ್ರತಿ ಫ್ರಾಂಚೈಸಿಯ ತಂಡ ವ್ಯವಸ್ಥಾಪಕರಿಗೂ ಈ ಸಭೆಗೆ ಆಹ್ವಾನ ನೀಡಲಾಗಿದೆ. ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿಯಿಂದ ನೀಡಲಾದ ಅಧಿಕೃತ ಮಾಹಿತಿ ಪ್ರಕಾರ, ಈ ಸಭೆಯಲ್ಲಿ 2025ನೇ ಆವೃತ್ತಿಗೆ ಸಂಬಂಧಿಸಿದ ಹೊಸ ನಿಯಮಗಳು, ತಂತ್ರಗಾರಿಕೆಗಳು ಹಾಗೂ ಟೂರ್ನಮೆಂಟ್ನ ಹೊಸ ಅಪ್ಡೇಟ್ಗಳ ಬಗ್ಗೆ ತಂಡ ನಾಯಕರು ಮತ್ತು ನಿರ್ವಾಹಕರಿಗೆ ಮಾಹಿತಿ ನೀಡಲಾಗುತ್ತದೆ.
ಈ ಒಂದು ಗಂಟೆ ನಡೆಯುವ ಸಭೆಯ ನಂತರ, ನಾಯಕರು ಮುಂಬೈನ ತಾಜ್ ಹೋಟೆಲ್‌ಗೆ ತೆರಳಿ, ಪ್ರಾಯೋಜಕರಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಪೂರ್ಣ ಕಾರ್ಯಕ್ರಮ ಸುಮಾರು ನಾಲ್ಕು ಗಂಟೆಗಳ ಕಾಲ ನಡೆಯಲಿದ್ದು, ಎಲ್ಲಾ ತಂಡದ ನಾಯಕರು ಭಾಗವಹಿಸುವ ಸಂಪ್ರದಾಯಬದ್ಧ ಹಂಗಾಮುಖಿ ಫೋಟೋಶೂಟ್‌ನೊಂದಿಗೆ ಕೊನೆಗೊಳ್ಳಲಿದೆ.
ಮುಂಬೈನಲ್ಲೇ ಸಭೆ ಏಕೆ?
ಸಾಮಾನ್ಯವಾಗಿ ಸಭೆ ಹಾಗೂ ಫೋಟೋಶೂಟ್ಗಳನ್ನು ಐಪಿಎಲ್ ಉದ್ಘಾಟನಾ ಪಂದ್ಯ ನಡೆಯುವ ನಗರದಲ್ಲೇ ಆಯೋಜಿಸಲಾಗುತ್ತದೆ. ಆದರೆ ಈ ಬಾರಿ ಕೋಲ್ಕತ್ತಾದಲ್ಲಿ ಐಪಿಎಲ್ 2025 ಆರಂಭವಾಗುತ್ತಿದ್ದರೂ, ಬಿಸಿಸಿಐ ಮುಂಬೈನಲ್ಲೇ ಸಭೆ ನಡೆಸಲು ನಿರ್ಧರಿಸಿದೆ. ಇದು ಕೇವಲ ಟೂರ್ನಮೆಂಟ್ನ ನಿಯಮಗಳ ಬಗ್ಗೆ ಚರ್ಚೆ ಮಾಡುವಂತಹ ಸಭೆಯಷ್ಟೇ ಅಲ್ಲ, ಈ ಬಾರಿ ಹೆಚ್ಚಿನ ಮಹತ್ವವುಳ್ಳ ವಿಷಯಗಳು ಚರ್ಚೆಯಾಗಬಹುದೆಂಬ ಸೂಚನೆಯನ್ನು ನೀಡುತ್ತಿದೆ.
ಎಲ್ಲಾ 10 ತಂಡಗಳ ನಾಯಕರು ಸಿದ್ಧ
ಬಿಸಿಸಿಐ ಈ ಸಭೆಯನ್ನು ಕೇವಲ ಟೂರ್ನಮೆಂಟ್ನ ನಿಯಮಗಳ ಪರಿಷ್ಕರಣೆಗಳಿಗಾಗಿ ನಡೆಸುತ್ತಿದೆಯಾ ಅಥವಾ ಇನ್ನೂ ಹೆಚ್ಚಿನ ಪ್ರಮುಖ ವಿಷಯಗಳೂ ಚರ್ಚೆಯಾಗಲಿವೆಯಾ ಎಂಬುದನ್ನು ನೋಡಬೇಕಾಗಿದೆ. ಎಲ್ಲಾ 10 ಐಪಿಎಲ್ ತಂಡಗಳು 2025ನೇ ಆವೃತ್ತಿಗೆ ತಮ್ಮ ನಾಯಕರನ್ನು ಅಧಿಕೃತವಾಗಿ ಘೋಷಿಸಿವೆ. ಡೆಲ್ಲಿ ಕ್ಯಾಪಿಟಲ್ಸ್ ಅಕ್ಷರ್ ಪಟೇಲ್ ಅವರನ್ನು ಹೊಸ ನಾಯಕನಾಗಿ ನೇಮಕ ಮಾಡಿದೆ.
ರಾಜತ್ ಪಾಟೀದಾರ್ RCBಗೆ ನಾಯಕತ್ವ ವಹಿಸಿದ್ದು . ಅಜಿಂಕ್ಯ ರಹಾನೆ (KKR), ಶ್ರೇಯಸ್ ಅಯ್ಯರ್ (PBKS), ಮತ್ತು ಋಷಭ್ ಪಂತ್ (LSG) ಹೊಸ ನಾಯಕರಾಗಿ ನೇಮಕಗೊಂಡಿದ್ದಾರೆ. ಪಾಟ್ ಕಮಿನ್ಸ್ (SRH), ಹಾರ್ದಿಕ್ ಪಾಂಡ್ಯಾ (MI) ಮತ್ತು ರುತುರಾಜ್ ಗಾಯಕ್ವಾಡ್ (CSK) ಅವರ ತಂಡಗಳನ್ನು ಮುಂದುವರಿಸಿ ಮುನ್ನಡೆಸಲಿದ್ದಾರೆ.
ಸಂಜು ಸ್ಯಾಮ್ಸನ್ (ರಾಜಸ್ಥಾನ್ ರಾಯಲ್ಸ್) ಮತ್ತು ಶುಭ್‌ಮನ್ ಗಿಲ್ (ಗುಜರಾತ್ ಟೈಟಾನ್ಸ್) ತಮ್ಮ ತಂಡಗಳಿಗೆ ಮುನ್ನಡೆ ನೀಡಲಿದ್ದಾರೆ. ಇತ್ತೀಚೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ನಲ್ಲಿ ಆಡಿದ ಹೆಚ್ಚಿನ ಆಟಗಾರರು ಈಗ ತಮ್ಮ ಐಪಿಎಲ್ ತಂಡಗಳಿಗೆ ಸೇರ್ಪಡೆಯಾಗಿದ್ದಾರೆ.
SRH ನಾಯಕ ಪಾಟ್ ಕಮಿನ್ಸ್ ಮಾರ್ಚ್ 16ರಂದು ಹೈದರಾಬಾದ್‌ಗೆ ಆಗಮಿಸಿದ್ದು, ಈ ಋತು ಸಂಪೂರ್ಣವಾಗಿ ಆಡಲು ತಯಾರಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಮೇ 25ರಂದು ನಡೆಯುವ ಐಪಿಎಲ್ ಫೈನಲ್ ನಂತರ ಕೇವಲ ಎರಡು ವಾರಗಳೊಳಗೆ ಜೂನ್ 11ರಂದು ಲಾರ್ಡ್ಸ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಡೆಯಲಿದ್ದರೂ, ಕಮಿನ್ಸ್ ಐಪಿಎಲ್ ಆಡಲು ಸಂಪೂರ್ಣ ಸಮಯ ನೀಡಲಿದ್ದಾರೆ.
ಇದನ್ನು ಹೊರತುಪಡಿಸಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ದಕ್ಷಿಣ ಆಫ್ರಿಕಾ ಆಲ್‌ರೌಂಡರ್ ಕೊರ್ಬಿನ್ ಬೋಷ್ ಅವರಿಗೆ ಕಾನೂನು ನೋಟಿಸ್ ಕಳುಹಿಸಿದೆ. ಪೆಶಾವರ್ ಜಲ್ಮಿ ತಂಡವು ಪಿಎಸ್‌ಎಲ್ 2025 ಡ್ರಾಫ್ಟ್‌ನಲ್ಲಿ ಬೋಷ್ ಅನ್ನು ಆಯ್ಕೆ ಮಾಡಿತ್ತು, ಆದರೆ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಲಿಜಾದ್ ವಿಲಿಯಮ್ಸ್ ಪರಿಯಾಗಿ ಸೇರ್ಪಡೆಯಾದರು. ಐಪಿಎಲ್ 2025 ಮತ್ತು ಪಿಎಸ್‌ಎಲ್ 2025 ಟೂರ್ನಿಗಳು ಒಟ್ಟಿಗೆ ನಡೆಯುತ್ತಿರುವುದರಿಂದ, ಬೋಷ್ ಪಿಎಸ್‌ಎಲ್‌ನಿಂದ ಹಿಂದೆ ಸರಿದಿದ್ದರು.