ಬಿಬಿಎಂಪಿಯ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ. ಬಿಬಿಎಂಪಿ ಕೇಂದ್ರ ಕಚೇರಿ ಸೇರಿದಂತೆ ನಾಲ್ಕು ವಲಯಗಳಲ್ಲಿ ಇಡಿ ಅಧಿಕಾರಿಗಳು ನಿನ್ನೆಯಿಂದಲೇ ದಾಳಿ ನಡೆಸಿದ್ದಾರೆ. ಇಂದು ಕೂಡ ಪಾಲಿಕೆಯ ಕೇಂದ್ರ ಕಚೇರಿಗೆ ಭೇಟಿ ನೀಡಿ ಹಲವು ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ಅಲ್ಲದೇ, ಕೆಲವು ಕಾಮಗಾರಿಗಳ ಬಿಲ್ ಪಾವತಿ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಇಡಿ ಅಧಿಕಾರಿಗಳು, ನಿನ್ನೆ ಪಾಲಿಕೆ ಕೇಂದ್ರ ಕಚೇರಿ ಸೇರಿದಂತೆ ಬಿಬಿಎಂಪಿಯ ನಾಲ್ಕು ವಲಯದ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಇಂದು ಕೂಡ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಕೆಲವು ಮಹತ್ವದ ದಾಖಲೆಯನ್ನು ಪರಿಶೀಲನೆ ನಡೆಸಿ, ಹಲವು ದಾಖಲೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಿಗ್ಗೆಯಿಂದ ಐವರು ಇಡಿ ಅಧಿಕಾರಿಗಳು ಪಾಲಿಕೆಯ ಕೇಂದ್ರ ಕಚೇರಿ ಚೀಫ್ ಇಂಜಿನಿಯರ್ ಕೊಠಡಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಗರೋತ್ಥಾನ ಅಡಿಯಲ್ಲಿ ಕೋಟ್ಯಾಂತರ ಹಣದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೇ, ಹಲವು ಬಿಲ್ ಬಗ್ಗೆ ಅನುಮಾನ ವ್ಯಕ್ತಪಡಿಸಿ. ಸೂಕ್ತ ಬಿಲ್ ಪಾವತಿಯ ಬ್ಯಾಲೆನ್ಸ್ ಶೀಟ್ ನೀಡುವಂತೆ ಪಾಲಿಕೆಯ ಚೀಫ್ ಅಕೌಂಟೆಂಟ್ ಅಧಿಕಾರಿಗೆ ಸೂಚಿಸಿದ್ದಾರೆ.
10 ವರ್ಷಗಳಿಂದ ನಗರದಲ್ಲಿ ನಡೆಸಿರುವ ಬೃಹತ್ ಕಾಮಗಾರಿಗಳು ಹಾಗೂ ಕೊಳವೆ ಬಾವಿ, ಅರ್ ಓ ಪ್ಲಾಂಟ್ ಗಳ ಕಾಮಗಾರಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ದಾಖಲೆ ಪರಿಶೀಲಿಸಿ ಕೆಲವು ಅಧಿಕಾರಿಗಳ ವಿಚಾರಣೆ ನಡೆಸಿದ್ದಾರೆ.
ರಾಜಕಾಲುವೆ ಹೂಳೆತ್ತುವುದರ ಬಗ್ಗೆ ಸೇರಿದಂತೆ 10 ವರ್ಷಗಳಲ್ಲಿ ಪಾಲಿಕೆ ನಡೆಸಿರುವ ಎಲ್ಲ ಬೃಹತ್ ಕಾಮಗಾರಿಗಳ ಬಿಲ್ ಚೆಕ್ ಮಾಡಿದ್ದಾರೆ. ಪಾಲಿಕೆಗೆ ಸಂಬಂಧಿಸಿದ ಸುಮಾರು 10ಕ್ಕೂ ಅಧಿಕ ಅಕೌಂಟ್ ಗಳ ಡೆಬಿಟ್, ಕ್ರೆಡಿಟ್ ಬಗ್ಗೆ ಪರಿಶೀಲನೆ ನಡೆಸಿದಾಗ ಕೆಲವು ಕಾಮಗಾರಿಗಳ ಕೆಲಸ ಅರ್ಧವಾಗಿದ್ದರೂ ಸಂಪೂರ್ಣ ಬಿಲ್ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.