ನಿರ್ಮಾಣ ಹಂತದ ಅನಧಿಕೃತ ಕಟ್ಟಡಗಳ ಮೇಲೆ ಬಿಬಿಎಂಪಿ ಸಮರ ಸಾರಿದ್ದು, ಸಮೀಕ್ಷೆಗೆ ಮುಂದಾಗಿದೆ.
2024ರ ಅಕ್ಟೋಬರ್ ನಲ್ಲಿ ನಗರದ ಬಾಬುಸಾ ಪಾಳ್ಯದಲ್ಲಿ ಅನಧಿಕೃತ ಕಟ್ಟಡ ಕುಸಿದ ಪರಿಣಾಮ 9 ಜನ ಕಾರ್ಮಿಕರು ಸಾವನ್ನಪ್ಪಿದ್ದರು. ಈ ಪ್ರಕರಣದ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳು ಅನಧಿಕೃತ ಕಟ್ಟಡಗಳ ವಿರುದ್ಧ ಸಮರ ಸಾರಿದ್ದಾರೆ.
ಹೀಗಾಗಿ ನಗರದಲ್ಲಿರುವ ನಿರ್ಮಾಣ ಹಂತದ ಕಟ್ಟಡಗಳ ಸಮೀಕ್ಷೆಗೆ ಪಾಲಿಕೆ ಮುಂದಾಗಿದೆ. ಈಗಾಗಲೇ ಸಮೀಕ್ಷೆ ಕಾರ್ಯ ಕೂಡ ನಡೆದಿದೆ. ಸದ್ಯದ ಮಾಹಿತಿಯಂತೆ, ನಗರದಲ್ಲಿ 2 ಸಾವಿರಕ್ಕೂ ಅಧಿಕ ಅಕ್ರಮ ಕಟ್ಟಡಗಳಿವೆ. ಈ ಪೈಕಿ ಮಹಾದೇವಪುರ ವಲಯದಲ್ಲಿ ಅತಿ ಹೆಚ್ಚು ಅನಧಿಕೃತ ನಿರ್ಮಾಣ ಹಂತದ ಕಟ್ಟಡಗಳು ಪತ್ತೆಯಾಗಿವೆ. ಮಹಾದೇವಪುರ ವಲಯವೊಂದರಲ್ಲೇ 400ಕ್ಕೂ ಅಧಿಕ ಅನಧಿಕೃತ ನಿರ್ಮಾಣ ಹಂತದ ಕಟ್ಟಡಗಳು ಪತ್ತೆಯಾಗಿವೆ.
ಈ ಕಟ್ಟಡಗಳಿಗೆ ಈಗಾಗಲೇ ಬಿಬಿಎಂಪಿ ನೋಟಿಸ್ ನೀಡಿದೆ. ಅನಧಿಕೃತ ಕಟ್ಟಡಗಳ ಮೇಲೆ ಬ್ಯಾನರ್ ಕೂಡ ಅಳವಡಿಸಲಾಗಿದ್ದು, ಕಟ್ಟಡ ತೆರವಿಗೆ ಸೂಚನೆ ನೀಡಲಾಗಿದೆ. ನೋಟೀಸ್ ನೀಡಿದ 7 ದಿನಗಳಲ್ಲಿ ಕಟ್ಟಡ ತೆರವುಗೊಳಿಸುವಂತೆ ಸೂಚಿಸಲಾಗಿದೆ. ಇಲ್ಲವಾದರೆ, ಸೀಜ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.