ಬೆಂಗಳೂರು: ಬಿಬಿಎಂಪಿ ಮತ್ತೊಮ್ಮೆ ಸಾಲಕ್ಕೆ ಕೈ ಚಾಚಿದ್ದು, ಟನಲ್ ರಸ್ತೆ ನಿರ್ಮಾಣಕ್ಕಾಗಿ ಸಾಲದ ಮೊರೆ ಹೋಗಿದೆ.
ಹುಡ್ಕೋ ಬ್ಯಾಂಕ್ ನಲ್ಲಿ ಸುಮಾರು 13 ಸಾವಿರ ಕೋಟಿ ರೂ. ಸಾಲ ಮಾಡಲು ಪಾಲಿಕೆ ಮುಂದಾಗಿದೆ. ಈಗಾಗಲೇ ಟನಲ್ ರಸ್ತೆ ನಿರ್ಮಾಣಕ್ಕೆ ಸಾಲ ಕೊಡಲು ಹುಡ್ಕೋ ಬ್ಯಾಂಕ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ಟನಲ್ ರಸ್ತೆ ನಿರ್ಮಾಣದ ಡಿಪಿಆರ್ ಕೂಡ ಸಿದ್ಧಪಡಿಸಿದ್ದಾರೆ.
ಇದೇ ತಿಂಗಳ ಕೊನೆಯಲ್ಲಿ ಟೆಂಡರ್ ಮೂಲಕ ಟನಲ್ ರಸ್ತೆ ನಿರ್ಮಾಣಕ್ಕೆ ಪಾಲಿಕೆ ಅಸ್ತು ಎನ್ನಲಿದೆ. ಈ ಟನಲ್ ರಸ್ತೆ ನಿರ್ಮಾಣಕ್ಕೆ ಅಂದಾಜು 13 ಸಾವಿರ ಕೋಟಿ ರೂ. ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಪಾಲಿಕೆ, ಟನಲ್ ರಸ್ತೆ ನಿರ್ಮಾಣಕ್ಕಾಗಿ ಖಾಸಗಿ ಬ್ಯಾಂಕ್ ಗಳ ಮೊರೆ ಹೋಗಿತ್ತು. ಈಗ ಹುಡ್ಕೋ ಬ್ಯಾಂಕ್ ಸಾಲ ಕೊಡಲು ಮುಂದೆ ಬಂದಿದೆ. ಕಡಿಮೆ ಬಡ್ಡಿಯಲ್ಲಿ ಸಾಲ ನೀಡಲು ಹುಡ್ಕೋ ನಿರ್ಧರಿಸಿದೆ. ಸಾಲಕ್ಕೆ ಸರ್ಕಾರ ಗ್ಯಾರಂಟಿ ನೀಡಲಿದೆ. ಮುಂದಿನ ಕ್ಯಾಬಿನೆಟ್ ನಲ್ಲಿ ಈ ಯೋಜನೆಗೆ ಗ್ರೀನ್ ಸಿಗ್ನಲ್ ಸಿಗಲಿದ್ದು, ಬಜೆಟ್‌ನಲ್ಲಿ ಈ ಯೋಜನೆಗೆ ಅನುಮೋದನೆ ಸಿಗುತ್ತದೆ. ಹೀಗಾಗಿ ಮುಂದಿನ ವಾರ ಸಾಲಕ್ಕೆ ಬೇಕಾದ ದಾಖಲೆಗಳನ್ನು ಬಿಬಿಎಂಪಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ತುಷಾರ ಗಿರಿನಾಥ್ ಹೇಳಿದ್ದಾರೆ.