ಬಿಬಿಎಂಪಿ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಗೆ ಕಾಲ ಕೂಡಿ ಬರುತ್ತಿದೆ.
ಸರ್ವಧರ್ಮ ಕ್ಕೂ ಜೈ ಎಂದಿರುವ ಪಾಲಿಕೆ ಪೌರ ಕಾರ್ಮಿಕರ ನೇಮಕಾತಿಯಲ್ಲಿ ದಾಖಲೆ ಬರೆಯುತ್ತಿದೆ.
ಬರೋಬ್ಬರಿ 12,650 ಪೌರ ಕಾರ್ಮಿಕ ಹುದ್ದೆಗಳ ಭರ್ತಿಗೆ ಬಿಬಿಎಂಪಿ ಮುಂದಾಗಿದೆ. ಹೀಗಾಗಿ ಸದ್ಯದಲ್ಲೇ ಇಷ್ಟೊಂದು ಪ್ರಮಾಣದ ಪೌರ ಕಾರ್ಮಿಕರಿಗೆ ನೇಮಕಾತಿ ಭಾಗ್ಯ ಸಿಗಲಿದೆ.
ಈಗಾಗಲೇ ಪೊಲೀಸ್ ವೆರಿಫಿಕೇಷನ್ ಪ್ರಕ್ರಿಯೆ ಬಹುತೇಕ ಪೂರ್ಣವಾಗಿದೆ. ಸದ್ಯದಲ್ಲೇ ಅಧಿಸೂಚನೆ ಹೊರಡುವ ಸಾಧ್ಯತೆ ಇದೆ. ಈ ಮೂಲಕ ಬೆಂಗಳೂರು ಎದುರಿಸುತ್ತಿರುವ ಪೌರ ಕಾರ್ಮಿಕರ ಕೊರತೆಗೆ ಫುಲ್ ಸ್ಟಾಪ್ ಇಡಲು ಮುಂದಾಗಲಾಗಿದೆ. 12,650 ಪೌರ ಕಾರ್ಮಿಕರನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿರುವ ಬಿಬಿಎಂಪಿ, 8000 ಕ್ಕೂ ಅಧಿಕ ಮಹಿಳೆಯರನ್ನು ಭರ್ತಿ ಮಾಡಿಕೊಳ್ಳಲು ನಿರ್ಧರಿಸಿದೆ.
ಶೇ. 75ರಷ್ಟು ಮಹಿಳೆಯರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಅಲ್ಲದೇ, ಎಲ್ಲ ಸಮುದಾಯದವರಿಗೂ ಅವಕಾಶ ನೀಡಲಾಗುತ್ತಿದೆ. ಮೀಸಲಾತಿ ಆಧಾರದ ಮೇಲೆಯೇ ಭರ್ತಿ ಮಾಡಿಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.
ಕೇವಲ ಎಸ್ಸಿ, ಎಸ್ಟಿ ಪಂಗಡಕ್ಕಷ್ಟೇ ಪೌರ ಕಾರ್ಮಿಕ ಹುದ್ದೆಯನ್ನು ಸೀಮಿತ ಮಾಡದೆ ಒಕ್ಕಲಿಗ, ಲಿಂಗಾಯತ, ಕ್ರೈಸ್ತ, ಮುಸ್ಲಿಂ ಸಮುದಾಯವರಿಗೂ ಅವಕಾಶ ನೀಡಲಾಗುತ್ತಿದೆ.