ಬೆಂಗಳೂರು: ಗ್ಯಾರಂಟಿ ಯೋಜನೆಯ ಅನುಷ್ಟಾನ ಸಮಿತಿಗೆ ಬಿಬಿಎಂಪಿಯಿಂದ ಲಕ್ಷಾಂತರ ರೂಪಾಯಿ ಹಣ ಹರಿದು ಬಂದಿದೆ ಎನ್ನಲಾಗಿದೆ.
ಗ್ಯಾರಂಟಿ ಯೋಜನೆಯ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಕ್ಷೇತ್ರವಾರು ಅಧ್ಯಕ್ಷರಿಗೆ ಬಿಬಿಎಂಪಿಯಿಂದ ವೇತನ ಹರಿದು ಬಂದಿದೆ ಎನ್ನಲಾಗಿದೆ. ಪಕ್ಷದ ಯೋಜನೆಗೆ ಬಿಬಿಎಂಪಿ ತೆರಿಗೆದಾರರ ಹಣವನ್ನು ಹೀಗೆ ನೀಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಈಗಾಗಲೇ ಗ್ಯಾರಂಟಿ ಯೋಜನೆ ಜಾರಿಗೆ ತಂದಿರುವ ಕಾಂಗ್ರೆಸ್ ಸರ್ಕಾರ, ರಾಜ್ಯಾದ್ಯಂತ ಅಧ್ಯಕ್ಷ, ಉಪಾಧ್ಯಕ್ಷ, ಸಮಿತಿ ಸದಸ್ಯರನ್ನು ನೇಮಕ ಮಾಡಿದೆ. ಕಾರ್ಯಕರ್ತರನ್ನೇ ಸಮಿತಿಯ ಅಧ್ಯಕ್ಷರು ಸೇರಿದಂತೆ ಸದಸ್ಯರನ್ನಾಗಿ ಮಾಡಲಾಗಿದೆ. ಆದರೆ, ಇವರಿಗೆ ತಿಂಗಳಿಗೆ ಲಕ್ಷಾಂತರ ಹಣ ದುಂದು ವೆಚ್ಚ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಬೆಂಗಳೂರು ನಗರದಲ್ಲಿ ಗ್ಯಾರಂಟಿ ಯೋಜನೆಯ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಅವರ ಕೆಳಗೆ ಐವರು ಉಪಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಅಲ್ಲದೇ, ಬೆಂಗಳೂರಿನಲ್ಲಿನ 28 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 28 ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಅಧ್ಯಕ್ಷರ ಕೆಳಗೆ 15 ಜನ ಸಮಿತಿಯ ಸದಸ್ಯರನ್ನು ನೇಮಕ ಮಾಡಲಾಗಿದೆ. ಈ ಎಲ್ಲರಿಗೂ ಬಿಬಿಎಂಪಿಯಿಂದ ವೇತನ ನೀಡಲಾಗುತ್ತಿದೆ.
ವೇತನ ಜೊತೆ ಪಾಲಿಕೆಯ ಬಿಟ್ಟಿ ಕಟ್ಟಡ, ಅದಕ್ಕೆ ಸಿಬ್ಬಂದಿಗಳು, ವಿದ್ಯುತ್ ಬಿಲ್, ನೀರಿನ ಬಿಲ್ ಗಳನ್ನು ಬಿಬಿಎಂಪಿ ಪಾವತಿ ಮಾಡುತ್ತಿದೆ.
ಪಾಲಿಕೆಯಿಂದ ಪ್ರತಿ ತಿಂಗಳು ನೀಡುತ್ತಿರುವ ಹಣ ಎಷ್ಟು?
- ಗ್ಯಾರಂಟಿ ಯೋಜನೆಯ ಬೆಂಗಳೂರು ನಗರದ ಅಧ್ಯಕ್ಷರ ವೇತನ- 40 ಸಾವಿರ.
- ಅಧ್ಯಕ್ಷರ ಕೆಳಗಡೆ 5 ಉಪಾಧ್ಯಕ್ಷ ವೇತನ 10,000×5= 50 ಸಾವಿರ.
- 28 ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರು ಅಧ್ಯಕ್ಷರು 25000×28=7 ಲಕ್ಷ ರೂ.
- 28 ವಿಧಾನಸಭಾ ಕ್ಷೇತ್ರದ ಅಧ್ಯಕ್ಷರ ಕೆಳಗಡೆ 14 ಜನ ಸಮಿತಿ ಸದಸ್ಯರು- 2400 ರೂ. ( ಪ್ರತಿ ಸದಸ್ಯರಿಗೆ) 28 ವಿಧಾನಸಭಾ ಸಮಿತಿಯ ಒಟ್ಟು ಸದಸ್ಯರು=392 ಜನ. 392×2400=940800 ರೂ. ( ಪ್ರತಿ ತಿಂಗಳು).
- ಪ್ರತಿ ತಿಂಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಯ ಸಮಿತಿಗೆ 17,30,800 ರೂ. ವ್ಯಯಿಸಲಾಗುತ್ತಿದೆ.
ಇದರೊಂದಿಗೆ ಬೇರೆ ಬೇರೆ ರೀತಿಯ ಬಿಲ್ ಅಂತಾ ಹಣ ವ್ಯರ್ಥವಾಗುತ್ತಿದೆ. ಬೇರೆ ಕೆಲಸಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿ, ಕಚೇರಿಗಳನ್ನು ಇವುಗಳಿಗೆ ವಿನಿಯೋಗಿಸಲಾಗುತ್ತಿದೆ. ಹೀಗೆ ತೆರಿಗೆದಾರರ ದುಡ್ಡು ಪೋಲು ಮಾಡುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.