ತೀವ್ರ ಕುತೂಹಲ ಕೆರಳಿಸಿದ ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಮುಗಿದಿದೆ. ಸುದೀಪ್ ಅವರು ಈ ಸೀಸನ್ನ ವಿನ್ನರ್ನ ಘೋಷಣೆ ಮಾಡಿದ್ದಾರೆ. ಬಹುತೇಕರು ಮೊದಲೇ ಊಹಿಸಿದ್ದಂತೆ ಗಿಲ್ಲಿ ನಟ ಅವರು 12ನೇ ಸೀಸನ್ನ ವಿನ್ನರ್ ಆಗಿದ್ದಾರೆ. ತಮ್ಮ ಹಾಸ್ಯದಿಂದ ಅವರು ಪ್ರೇಕ್ಷಕರ ಮನಸ್ಸು ಗೆದ್ದಿದ್ದರು. ಬಿಗ್‌ಬಾಸ್ 12ರ ಮನೆಗೆ ಒಟ್ಟು 24 ಮಂದಿ ಬಂದಿದ್ದರು. ಅವರಲ್ಲಿ ಬಹುತೇಕರು ನಟರು, ಆದರೆ ರಕ್ಷಿತಾ ಶೆಟ್ಟಿ ನಟನೆಯ ಸಣ್ಣ ಹಿನ್ನೆಲೆಯೂ ಇಲ್ಲದೆ, ಉಡುಪಿಯ ಹಳ್ಳಿಯೊಂದರಲ್ಲಿ ತಮಗೆ ತೋಚಿದಂತೆ ಅಡುಗೆ ವಿಡಿಯೋಗಳ ಮಾಡುತ್ತಿದ್ದ ಕನ್ನಡ ಭಾಷೆಯೂ ಸಹ ಸರಿಯಾಗಿ ಬಾರದ ಸಾಮಾನ್ಯ ಹುಡುಗಿ ಬಿಗ್ಬಾಸ್ಗೆ ಬಂದು ಫಿನಾಲೆವರೆಗೂ ಬಂದಿರುವುದು ಸಾಮಾನ್ಯ ಸಾಧನೆಯಂತೂ ಅಲ್ಲ.

ಪಟ ಪಟ ಪಟಾಕಿ ಟಾಕಿಂಗ್ ಪೋರಿ ಅಂತಲೇ ಫೇಮಸ್ ಆಗಿರುವ ರಕ್ಷಿತಾ ಸಾದಾ ಸೀದಾ ಹುಡುಗಿ. ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ ಹೇಳುವ ಬಿಗ್ ಬಾಸ್ ಬೆಡಗಿ ಆಗಿದ್ದಾರೆ. ರಕ್ಷಿತಾ ಗೆಲ್ಲಬೇಕು ಅನ್ನೋದು ಅದೆಷ್ಟೋ ಅಭಿಮಾನಿಗಳ ಮಹದಾಸೆ ಆಗಿತ್ತು. ಆದರೆ ಕೊನೆಯ ಹಂತದಲ್ಲಿ ಬಿಗ್ ಬಾಸ್ ಟೈಟಲ್‌ನಿಂದ ರಕ್ಷಿತಾ ವಂಚಿತರಾಗಿದ್ದಾರೆ. ಆದರೆ ಕರ್ನಾಟಕದ ಕೋಟ್ಯಾಂತರ ಮನಸ್ಸುಗಳನ್ನು ಗೆಲ್ಲುವಲ್ಲಿ ರಕ್ಷಿತಾ ಶೆಟ್ಟಿ ಯಶಸ್ವಿಯಾಗಿದ್ದಾರೆ.

ಬಿಗ್ ಬಾಸ್ ಮನೆಗೆ ನಾಲ್ಕನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದ ರಕ್ಷಿತಾ ಶೆಟ್ಟಿ ಮೂಲತಃ ಮಂಗಳೂರಿನವರು. ರಕ್ಷಿತಾ ಶೆಟ್ಟಿ ಹುಟ್ಟಿದ್ದು ಮಂಗಳೂರಿನ ಪಡುಬಿದ್ರೆಯಲ್ಲಿ. ಬೆಳೆದಿದ್ದೆಲ್ಲಾ ಮುಂಬೈನಲ್ಲಿ. ಮನೆಯಲ್ಲಿ ರಕ್ಷಿತಾ ಶೆಟ್ಟಿ ಮಾತನಾಡುವುದು ತುಳು. ರಕ್ಷಿತಾ ಶೆಟ್ಟಿಗೆ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ಕನ್ನಡ ಸರಿಯಾಗಿ ಬರದಿದ್ದರೂ, ಕನ್ನಡದಲ್ಲೂ ರಕ್ಷಿತಾ ಶೆಟ್ಟಿ ವ್ಲಾಗ್ಸ್ ಮಾಡುತ್ತಾರೆ. ಬರೀ ಕನ್ನಡ ಅಲ್ಲ, ತುಳು, ಹಿಂದಿ, ಇಂಗ್ಲಿಷ್‌ನಲ್ಲಿ ವ್ಲಾಗ್ಸ್ ರೀಲ್ಸ್ ಮಾಡುತ್ತಾರೆ. ಈ ಯೂಟ್ಯೂಬರ್, ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದರು. ಇದೀಗ ಬಿಗ್ ಬಾಸ್ ವೇದಿಕೆ ಮೂಲಕ ಕರ್ನಾಟಕದ ಮೂಲೆ ಮೂಲೆಗೂ ತಲುಪುವ ಮೂಲಕ ಜನಪ್ರಿಯತೆ ಪಡೆದು ಹೊರ ಬಂದಿದ್ದಾರೆ.

ಬಿಗ್‌ಬಾಸ್ ಮನೆಗೆ ಬಂದ ಮೊದಲ ದಿನವೇ ಮನೆಯಿಂದ ಎವಿಕ್ಟ್ ಆಗಿದ್ದ ರಕ್ಷಿತಾ, ಆ ನಂತರ ಮತ್ತೆ ಮನೆಗೆ ಎಂಟ್ರಿ ಕೊಟ್ಟು ಈಗ ಕೊನೆಯ ದಿನ ಮನೆಯಿಂದ ಹೊರಗೆ ಬಂದಿರುವುದು ಕಡಿಮೆ ಸಾಧನೆಯಲ್ಲ. ರಕ್ಷಿತಾ, ಆ ಮನೆಯಲ್ಲಿ ಹಲವು ರೀತಿಯ ನೋವು, ಅವಮಾನಗಳನ್ನು ಅನುಭವಿಸಿದ್ದಾರೆ. ರಕ್ಷಿತಾ, ತಮ್ಮ ಮುಗ್ಧತೆಯಿಂದ ಪ್ರೇಕ್ಷಕರ ಮನಸ್ಸು ಗೆದ್ದರೂ ಸಹ ಅಲ್ಲಿದ್ದ ಸ್ಪರ್ಧಿಗಳಿಗೆ ಅದು ಅಸಹನೀಯ ಅನಿಸಿ ಹಲವರು ರಕ್ಷಿತಾ ಮೇಲೆ ಜಗಳ ಮಾಡಿದ್ದಾರೆ.

ರಕ್ಷಿತಾರನ್ನು ಎಂಟರ್ಟೈನ್ಮೆಂಟ್ಗೆ ಬಳಸಿಕೊಂಡರು, ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವ ನೌಕರಳಂತೆ ನಡೆಸಿಕೊಂಡರು, ತಮಾಷೆ ಮಾಡಲು ಬಳಸಿಕೊಂಡರು, ಫುಟೇಜ್ ತೆಗೆದುಕೊಳ್ಳಲು ಪುಕ್ಕಟೆ ಜಗಳ ಮಾಡಲು ಪಂಚಿಂಗ್ ಬ್ಯಾಗ್ನಂತೆ ನಡೆಸಿಕೊಂಡರು. ರಕ್ಷಿತಾರ ಬಣ್ಣದ ಬಗ್ಗೆ ಆಡಿಕೊಳ್ಳಲಾಯ್ತು, ಸ್ಲಂ ಎಂದು ಕರೆಯಲಾಯ್ತು, ‘ಸೆಡೆ’ ಎಂದು ಬೈಯ್ಯಲಾಯ್ತು, ರಕ್ಷಿತಾರ ಹಿನ್ನೆಲೆಯನ್ನು ಟೀಕಿಸಲಾಯ್ತು, ಆಕೆ ಧರಿಸುವ ಬಟ್ಟೆಗಳನ್ನು ಟೀಕಿಸಲಾಯ್ತು ಎಲ್ಲ ಅವಮಾನಗಳನ್ನು ಎದುರಿಸಿಯೂ ರಕ್ಷಿತಾ ಫಿನಾಲೆ ವರೆಗೆ ಬಂದರು. ಮಾತ್ರವಲ್ಲ, ಘಟಾನುಘಟಿಗಳನ್ನೇ ಹಿಂದಿಕ್ಕಿ ರನ್ನರ್ ಅಪ್ ಆಗಿ ಮಿಂಚಿದ್ದಾರೆ.

ಇಡೀ ಬಿಗ್‌ಬಾಸ್ ಮನೆಯಲ್ಲಿ ಕಿರಿಯ ವ್ಯಕ್ತಿ, ಅನುಭವವೂ ಕಡಿಮೆ ಆದರೆ ಹಲವು ಸಂದರ್ಭದಲ್ಲಿ ಘನತೆಯಿಂದ ನಡೆದುಕೊಂಡಿದ್ದಾರೆ. ಘನತೆಯಿಂದ ವರ್ತಿಸಿದ್ದಾರೆ. ತಪ್ಪಿದ್ದಲ್ಲಿ ತಪ್ಪು ಎಂದಿದ್ದಾರೆ, ವಿರೋಧಿಗಳನ್ನೂ ಸಹ ಹೊಗಳಿದ್ದು ಸಹ ಇದೆ. ಯಾವ ನಾಟಕೀಯತೆಯೂ ಇಲ್ಲದೆ ಎಲ್ಲರೊಂದಿಗೆ ಬೆರೆತರು ಅವರ ಪ್ರಯಾಣ ನಿಜಕ್ಕೂ ಅಸಾಮಾನ್ಯಾಗಿತ್ತು. ಅವರು ರನ್ನರ್ ಅಪ್ ಆಗಿದ್ದರೂ ಸಹ ಅವರೇ ವಿನ್ನರ್, ‘ಗೊತ್ತಾಯ್ತಲ್ಲ’
ಇದನ್ನೂ ಓದಿ: ಬಿಗ್‌ಬಾಸ್ ವಿನ್ನರ್ ಗಿಲ್ಲಿ, ರನ್ನರ್ ರಕ್ಷಿತಾ, ಅಶ್ವಿನಿಗೌಡಗೆ ಏನೆಲ್ಲಾ ಬಹಿಮಾನ ಸಿಕ್ಕಿದೆ ಗೊತ್ತಾ?



















