ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಬಂಡಾಯದ ಬಾವುಟ ಹಾರಿಸಿರುವ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yantal) ಅವರು ಬಿಜೆಪಿ ಹೈಕಮಾಂಡ್ ನೀಡಿದ್ದ ಶೋಕಾಸ್ ನೋಟಿಸ್ ಗೂ ಕ್ಯಾರೇ ಎಂದಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಕುರಿತು 72 ಗಂಟೆಯೊಳಗೆ ಉತ್ತರ ನೀಡಬೇಕು ಎಂಬುದಾಗಿ ಬಿಜೆಪಿ ಶಿಸ್ತು ಸಮಿತಿಯು ನೋಟಿಸ್ ನೀಡಿದರೂ ಯತ್ನಾಳರು ಉತ್ತರ ನೀಡಿಲ್ಲ. ಹಾಗಾಗಿ, ಯತ್ನಾಳ್ ವಿರುದ್ಧ ಶಿಸ್ತು ಸಮಿತಿಯು ಕಠಿಣ ಕ್ರಮ ತೆಗೆದುಕೊಂಡರೂ ಅಚ್ಚರಿ ಇಲ್ಲ ಎಂದು ತಿಳಿದುಬಂದಿದೆ.
ಬಂಡಾಯ ನಾಯಕರನ್ನು ಕಟ್ಟಿಕೊಂಡು ದೆಹಲಿಗೆ ತೆರಳಿದ್ದ ಯತ್ನಾಳರು, ಬಿ.ವೈ.ವಿಜಯೇಂದ್ರ ಹಾಗೂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಟೀಕೆಗಳನ್ನು ಮಾಡಿದ್ದರು. ರಾಜ್ಯ ಬಿಜೆಪಿಯ ಬಿಕ್ಕಟ್ಟು ದೆಹಲಿ ತಲುಪಿದ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಯು ನೋಟಿಸ್ ಜಾರಿ ಮಾಡಿತ್ತು. ಇದಾದ ಬಳಿಕ ನಾನು ನೋಟಿಸ್ ಗೆ ಉತ್ತರ ನೀಡಲ್ಲ ಎಂದೇ ಯತ್ನಾಳರು ಹೇಳಿದ್ದರು. ಅದರಂತೆ, ಅವರು ನೋಟಿಸ್ ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಈ ಹಿಂದೆ ಪಕ್ಷದ ಹೈಕಮಾಂಡ್ ಮೂರು ಬಾರಿ ನೋಟಿಸ್ ನೀಡಿತ್ತು. ಆಗ ಉತ್ತರ ನೀಡಿದ್ದ ಅವರು, ಪಕ್ಷದ ಶಿಸ್ತು ಉಲ್ಲಂಘಿಸುವುದಿಲ್ಲಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದರು ಎಂದು ಹೇಳಲಾಗಿತ್ತು. ಈ ಬಾರಿ ಉತ್ತರ ನೀಡದೆ ಇರುವುದು ಗಂಭೀರ ಲೋಪವಾಗಿದೆ. ಹಾಗಾಗಿ ಹೈಕಮಾಂಡ್ ಶಿಸ್ತು ಕ್ರಮ ಜರುಗಿಸುವುದು ಖಚಿತ ಎಂದು ಹೇಳಲಾಗುತ್ತಿದೆ. ಆದರೆ, ಕಠಿಣ ಕ್ರಮದ ನಿರ್ಧಾರ ಯಾವಾಗ ಹೊರಬೀಳುತ್ತದೆ ಎಂಬ ಕುತೂಹಲ ಮೂಡಿದೆ.