ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕು ಎಂದು ಇನ್ನಿಲ್ಲದ ತಂತ್ರ ಹೆಣೆಯುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಬಣಕ್ಕೆ ಒಂದರ ಮೇಲೊಂದು ಹಿನ್ನಡೆಯಾಗುತ್ತಿವೆ. ದೆಹಲಿಗೆ ಹೋಗಿ, ಬರಿಗೈಯಲ್ಲಿ ವಾಪಸಾಗಿರುವ ಯತ್ನಾಳ್ ಬಣಕ್ಕೆ ಈಗ ಮತ್ತೊಂದು ಹಿನ್ನಡೆಯಾಗಿದೆ.
ಹೌದು, ತಟಸ್ಥ ಬಣದಲ್ಲಿರುವ ಬಸವರಾಜ ಬೊಮ್ಮಾಯಿ ಅವರನ್ನು ಭಿನ್ನರ ಬಣಕ್ಕೆ ಸೆಳೆದು, ಲಿಂಗಾಯತ ಶಾಸಕರು, ಮಾಜಿ ಸಚಿವರು, ನಾಯಕರನ್ನು ಒಗ್ಗೂಡಿಸುವ ಯತ್ನಾಳ್ ಟೀಮಿನ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ನಾನು ಯಾವುದೇ ಗುಂಪಿನ ಜತೆ ಗುರುತಿಸಿಕೊಳ್ಳುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಿರುವುದೇ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ.
“ನಾನು ಮೊದಲಿನಿಂದಲೂ ಗುಂಪುಗಾರಿಕೆ ಮಾಡಿದವನಲ್ಲ. ಯಾವುದೇ ಒಂದು ಸಮುದಾಯದ ಸಭೆಯನ್ನು ಕರೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬಿಜೆಪಿಯಲ್ಲಿ ಈಗ ಉದ್ಭವಿಸಿರುವ ಆಂತರಿಕ ಕಿತ್ತಾಟವು ದುರದೃಷ್ಟಕರ ಸಂಗತಿಯಾಗಿದೆ. ಬಿಜೆಪಿ ಹೈಕಮಾಂಡ್ ತೀರ್ಮಾನವೇ ನಮಗೆ ಅಂತಿಮವಾಗಿದೆ” ಎಂದು ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಬಂಡಾಯವೆದ್ದಿರುವ ಯತ್ನಾಳ್ ಬಣಕ್ಕೆ ಮತ್ತೊಂದು ಮುಖಭಂಗ ಉಂಟಾದಂತಾಗಿದೆ.
ದೆಹಲಿಯಲ್ಲಿ ಲಿಂಗಾಯತ ಶಾಸಕರು, ನಾಯಕರು ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಫೆಬ್ರವರಿ 10ರಂದು ಸಭೆ ನಡೆಯಲಿದೆ. ಇದರ ದಿಸೆಯಲ್ಲಿ ವಿ.ಸೋಮಣ್ಣ ಅವರ ನಿವಾಸದಲ್ಲೇ ಮಾತುಕತೆ ನಡೆದಿದೆ ಎಂದು ತಿಳಿದುಬಂದಿದೆ. ಆದರೆ, ಇವರ ಜತೆ ಸೇರಲು ಬಸವರಾಜ ಬೊಮ್ಮಾಯಿ ನಿರಾಕರಿಸಿದ್ದಾರೆ. ವಿಜಯೇಂದ್ರ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ದೂರುಗಳ ಪಟ್ಟಿ ತೆಗೆದುಕೊಂಡು ಹೋಗಿದ್ದ ಭಿನ್ನರಿಗೆ ಪಕ್ಷದ ಹಿರಿಯ ನಾಯಕರು ಭೇಟಿಗೂ ಅವಕಾಶ ಕೊಡದೆ ವಾಪಸ್ ಕಳುಹಿಸಿದ್ದಾರೆ. ಈಗ ಬಂಡಾಯ ನಾಯಕರು ಏನು ಮಾಡಲಿದ್ದಾರೆ? ಯಾವ ರಣತಂತ್ರ ರೂಪಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.