ಬೆಂಗಳೂರು: ಬೆಂಗಳೂರು ನಗರದಲ್ಲಿ ಮಧ್ಯರಾತ್ರಿಯವರೆಗೆ ಬಾರ್ ಆಂಡ್ ಹೋಟೆಲ್ ತೆಗೆಯಲು ಅನುಮತಿ ನೀಡುವಂತೆ ಹಲವಾರು ವರ್ಷಗಳಿಂದ ವ್ಯಾಪಾರಸ್ಥರು ಮನವಿ ಮಾಡುತ್ತಿದ್ದರು. ಈಗ ರಾಜ್ಯ ಸರ್ಕಾರಕ್ಕೆ ಅದಕ್ಕೆ ಅಸ್ತು ಅಂದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಬರುವ ಬಾರ್, ಹೋಟೆಲ್, ಕ್ಲಬ್, ಸ್ಟಾರ್ ಹೋಟೆಲ್ ಗಳು ಮತ್ತು ಬೋರ್ಡಿಂಗ್ ಹೌಸ್ ಗಳಲ್ಲಿ ಮಧ್ಯರಾತ್ರಿ 1ರ ವರೆಗೆ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ (Karnataka Government) ಅವಕಾಶ ಕಲ್ಪಿಸಿದೆ.
ವ್ಯಾಪಾರ, ವಾಹಿವಾಟು ಸುಧಾರಿಸುವ ಉದ್ದೇಶದಿಂದ ಬಿಬಿಎಂಪಿ ವ್ಯಾಪ್ತಿಯ ಬಾರ್, ಕ್ಲಬ್ ಸೇರಿದಂತೆ ಇನ್ನಿತರ ವ್ಯಾಪಾರ ಸಂಸ್ಥೆಗಳಲ್ಲಿ ಮಧ್ಯರಾತ್ರಿ 1ರ ವರೆಗೆ ತೆರೆಯಲು ಅನುಮತಿ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಫೆಬ್ರವರಿಯಲ್ಲಿ ಬಜೆಟ್ ಮಂಡನೆ ವೇಳೆ ಈ ನಿರ್ಧಾರ ಘೋಷಿಸಿದ್ದರು. ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ನಿರ್ಬಂಧವನ್ನು ವಿಸ್ತರಿಸಲಾಗಿದೆ ಎಂದು ಜುಲೈ 29ರಂದೇ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿನ ಮದ್ಯ ವ್ಯಾಪಾರ ಸಂಸ್ಥೆಗಳಿಗೆ ಮಾತ್ರ ಈ ಆದೇಶ ಅನ್ವಯಿಸಲಿದೆ. ಈ ನಿರ್ಧಾರ ರಾಜ್ಯ ಸರ್ಕಾರಕ್ಕೆ ತನ್ನ ಆದಾಯ ಸುಧಾರಿಸಲು ಸಹಾಯ ಮಾಡುತ್ತದೆ. ನಗರದ ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿರುವ ಬೃಹತ್ ಬೆಂಗಳೂರು ಹೋಟೆಲ್ ಗಳ ಸಂಘ (BBHA), ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ, ಸಂತಸ ಪಡುತ್ತಿವೆ.