ಬರೇಲಿ (ಉತ್ತರ ಪ್ರದೇಶ) : ವಿಶ್ವವಿದ್ಯಾಲಯ ಧನಸಹಾಯ ಆಯೋಗದ (UGC) ಹೊಸ ನಿಯಮಾವಳಿಗಳ ವಿರುದ್ಧದ ಆಕ್ರೋಶ ತೀವ್ರಗೊಳ್ಳುತ್ತಿರುವಂತೆಯೇ, ಈ ನಿಯಮಗಳನ್ನು ‘ಕರಾಳ ನಿಯಮ’ ಎಂದು ಬಣ್ಣಿಸಿರುವ ಬರೇಲಿ ಸಿಟಿ ಮ್ಯಾಜಿಸ್ಟ್ರೇಟ್ ಅಲಂಕಾರ್ ಅಗ್ನಿಹೋತ್ರಿ ಅವರು ಸೋಮವಾರ ತಮ್ಮ ಸೇವೆಗೆ ರಾಜೀನಾಮೆ ನೀಡಿದ್ದಾರೆ. ಸರ್ಕಾರದ ನೀತಿಗಳು ಸಮಾಜವನ್ನು ವಿಭಜಿಸುತ್ತಿವೆ ಮತ್ತು ಶೈಕ್ಷಣಿಕ ವಾತಾವರಣವನ್ನು ಹಾಳುಮಾಡುತ್ತಿವೆ ಎಂದು ಗಂಭೀರವಾಗಿ ಆರೋಪಿಸಿರುವ ಅವರು, ತಮ್ಮ ರಾಜೀನಾಮೆ ಪತ್ರವನ್ನು ಉತ್ತರ ಪ್ರದೇಶದ ರಾಜ್ಯಪಾಲರು ಹಾಗೂ ಜಿಲ್ಲಾಧಿಕಾರಿಗಳಿಗೆ ಇ-ಮೇಲ್ ಮೂಲಕ ರವಾನಿಸಿದ್ದಾರೆ.
ಏನಿದು ವಿವಾದ?
ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಯಲು ಯುಜಿಸಿ ಇತ್ತೀಚೆಗೆ ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಉತ್ತೇಜನ ನಿಯಮಾವಳಿ-2026’ ಅನ್ನು ಹೊರಡಿಸಿದೆ. ಇದರ ಅಡಿಯಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ವಿದ್ಯಾರ್ಥಿಗಳ ದೂರುಗಳ ವಿಚಾರಣೆಗಾಗಿ ವಿಶೇಷ ಸಮಿತಿ ಹಾಗೂ ಸಹಾಯವಾಣಿಗಳನ್ನು ಸ್ಥಾಪಿಸುವುದು ಕಡ್ಡಾಯವಾಗಿದೆ. ಆದರೆ, ಈ ನಿಯಮಗಳು ಕೇವಲ ಒಂದು ವರ್ಗದ ಪರವಾಗಿದ್ದು, ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಲು ಮತ್ತು ಸಾಮಾಜಿಕ ಅಶಾಂತಿ ಸೃಷ್ಟಿಸಲು ದಾರಿ ಕಲ್ಪಿಸಿಕೊಡುತ್ತವೆ ಎಂಬುದು 2019ರ ಬ್ಯಾಚ್ನ ಪಿಸಿಎಸ್ ಅಧಿಕಾರಿ ಅಗ್ನಿಹೋತ್ರಿ ಅವರ ವಾದವಾಗಿದೆ.
ಜಿಲ್ಲಾಧಿಕಾರಿ ನಿವಾಸದಲ್ಲಿ ‘ಬಂಧನ’ದ ಆರೋಪ
ರಾಜೀನಾಮೆ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅಗ್ನಿಹೋತ್ರಿ ಅವರು ಜಿಲ್ಲಾಧಿಕಾರಿ ಅವಿನಾಶ್ ಸಿಂಗ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ರಾಜೀನಾಮೆ ಕುರಿತು ಚರ್ಚಿಸಲು ಹೋದಾಗ ತಮ್ಮನ್ನು ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಸುಮಾರು 45 ನಿಮಿಷಗಳ ಕಾಲ ಒತ್ತೆಯಾಳಾಗಿ ಇರಿಸಲಾಗಿತ್ತು ಎಂದು ಅವರು ದೂರಿದ್ದಾರೆ. ಲಕ್ನೋದಿಂದ ಬಂದ ಕರೆಯೊಂದರ ನಂತರ ಅಧಿಕಾರಿಗಳು ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಮತ್ತು ‘ಪಂಡಿತನಿಗೆ ಹುಚ್ಚು ಹಿಡಿದಿದೆ’ ಎಂದು ಅಪಹಾಸ್ಯ ಮಾಡಿದರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಮನೆ ಖಾಲಿ ಮಾಡುವಂತೆ ತಮಗೆ ಆದೇಶಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತದ ಸ್ಪಷ್ಟನೆ
ಸಿಟಿ ಮ್ಯಾಜಿಸ್ಟ್ರೇಟ್ ಅವರ ‘ಒತ್ತೆ’ ಆರೋಪವನ್ನು ಜಿಲ್ಲಾಧಿಕಾರಿ ಅವಿನಾಶ್ ಸಿಂಗ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಅಗ್ನಿಹೋತ್ರಿ ಅವರು ಭೇಟಿಯಾಗಲು ಬಂದಾಗ ಎಲ್ಲಾ ಹಿರಿಯ ಅಧಿಕಾರಿಗಳು ಅಲ್ಲಿಯೇ ಇದ್ದರು ಮತ್ತು ಯಾವುದೇ ಅಸಭ್ಯ ವರ್ತನೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ರಾಜೀನಾಮೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ. ಈ ಬೆಳವಣಿಗೆಯಿಂದ ಬರೇಲಿಯಲ್ಲಿ ಬ್ರಾಹ್ಮಣ ಸಂಘಟನೆಗಳ ನಾಯಕರು ಒಗ್ಗೂಡುತ್ತಿದ್ದು, ಮೇಯರ್ ಡಾ. ಉಮೇಶ್ ಗೌತಮ್ ಅವರು ಅಗ್ನಿಹೋತ್ರಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಯುಜಿಸಿ ನಿಯಮಗಳಲ್ಲಿ ಕೆಲವು ಲೋಪದೋಷಗಳಿರಬಹುದು, ಅದನ್ನು ಸರಿಪಡಿಸಲು ಪ್ರಯತ್ನಿಸಲಾಗುವುದು ಎಂದು ಮೇಯರ್ ತಿಳಿಸಿದ್ದಾರೆ.
ಪ್ರಜಾಪ್ರಭುತ್ವದ ಮೌಲ್ಯಗಳ ಕುಸಿತದ ಆತಂಕ
ತಮ್ಮ ರಾಜೀನಾಮೆ ಪತ್ರದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿವೆ ಎಂದು ಅಗ್ನಿಹೋತ್ರಿ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಯಾಗ್ರಾಜ್ನಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಅವರನ್ನು ಪವಿತ್ರ ಸ್ನಾನ ಮಾಡದಂತೆ ತಡೆದ ಘಟನೆಯನ್ನು ಪ್ರಸ್ತಾಪಿಸಿರುವ ಅವರು, ವ್ಯವಸ್ಥೆಯಲ್ಲಿ ಧಾರ್ಮಿಕ ಮತ್ತು ಸಾಂವಿಧಾನಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಹೇಳಿದ್ದಾರೆ. ಈ ಬೆಳವಣಿಗೆಯನ್ನು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಾಯಕರು ತೀವ್ರವಾಗಿ ಖಂಡಿಸಿದ್ದು, ಇದು ಆಡಳಿತಾಧಿಕಾರಿಗಳ ಮೇಲಿರುವ ಒತ್ತಡ ಮತ್ತು ಸಂವಿಧಾನಕ್ಕೆ ಎದುರಾಗಿರುವ ಭೀತಿಯ ಸಂಕೇತ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ : ‘ಜನನಾಯಕನ್’ಗೆ ನಿಲ್ಲದ ಸಂಕಷ್ಟ | ವಿಜಯ್ ಚಿತ್ರದ ಸೆನ್ಸಾರ್ ಪ್ರಮಾಣಪತ್ರ ನೀಡುವ ಆದೇಶಕ್ಕೆ ಹೈಕೋರ್ಟ್ ತಡೆ!



















