ನೆಲಮಂಗಲ : ಕೆನಡಾದಲ್ಲಿ ಕನ್ನಡಿಗನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ನೆಲಮಂಗಲ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್(37) ಕಾರಿನಲ್ಲಿ ತೆರಳುತ್ತಿದ್ದಾಗ ಹತ್ತಾರು ಬಾರಿ ಹಂತಕರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಕೆನಡಾದಲ್ಲಿ ಕನ್ನಡ ಡಿಂಡಿಮವನ್ನು ಸಾರುತ್ತಿದ್ದ ಚಂದನ್ ಕುಮಾರ್, ಎಲ್‌ಎನ್‌ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 6 ವರ್ಷದಿಂದ ಕೆನಡಾದಲ್ಲಿದ್ದ ಚಂದನ್ ಅವರ ಪೋಷಕರಿಗೆ ನಿನ್ನೆ ಟೊರೊಂಟೋ ಪೊಲೀಸರು ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಭಾನುವಾರ ರಾತ್ರಿ 9 ಗಂಟೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಚಂದನ್ ಕುಮಾರ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಹಲವು ಗುಂಡುಗಳು ಚಂದನ್ ದೇಹವನ್ನು ಹೊಕ್ಕಿದ್ದು, ಘಟನಾ ಸ್ಥಳದಲ್ಲೇ ಚಂದನ್ ಸಾವನ್ನಪ್ಪಿದ್ದಾರೆ. ಚಂದನ್ ಬ್ರಾಂಪ್ಟನ್‌ನಲ್ಲಿರುವ ಶಿರಡಿ ಸಾಯಿಬಾಬಾ ದೇವಾಲಯದ ಸಕ್ರಿಯ ಸದಸ್ಯರಾಗಿದ್ದರು.
ಲಭ್ಯವಿರುವ ಮಾಹಿತಿಯ ಪ್ರಕಾರ, ಚಂದನ್ ಕುಮಾರ್ ಅವರು ತಮ್ಮ ಕಾರಿನಲ್ಲಿ ತೆರಳುತ್ತಿದ್ದ ವೇಳೆಯೇ ಈ ಘಟನೆ ನಡೆದಿದೆ ಎನ್ನಲಾಗಿದೆ. ವರದಿಯಲ್ಲಿ ಲಭ್ಯವಾಗಿರುವ ದೃಶ್ಯಾವಳಿಗಳ ಪ್ರಕಾರ, ಚಂದನ್ ಅವರ ಕಾರಿನ ಮುಂಭಾಗದ ಗಾಜಿನ ಮೇಲೆ ಗುಂಡು ಹೊಕ್ಕಿರುವ ಗುರುತುಗಳು ಸ್ಪಷ್ಟವಾಗಿ ಕಂಡುಬಂದಿವೆ. ಇದು ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಅಥವಾ ಸಮೀಪದಿಂದ ನಡೆಸಲಾದ ದಾಳಿ ಇರಬಹುದೆಂದು ಶಂಕಿಸಲಾಗಿದೆ.
ಮಗನ ಹತ್ಯೆಯ ವಿಷಯ ತಿಳಿಯುತ್ತಿದ್ದಂತೆಯೇ ಚಂದನ್ ಅವರ ನಿವಾಸದಲ್ಲಿ ಶೋಕ ಮಡುಗಿದೆ. ಪೋಷಕರು ಮತ್ತು ಸಂಬಂಧಿಕರು ಮಗನನ್ನು ಕಳೆದುಕೊಂಡ ದುಃಖದಲ್ಲಿ ಕಣ್ಣೀರಿಡುತ್ತಿದ್ದಾರೆ. ಮಗನ ಶವನನ್ನು ತವರಿಗೆ ತರಲು ಸರ್ಕಾರ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಬಂಧನ ಖಂಡನೀಯ | ಗಜೇಂದ್ರ ಎಸ್. ಬೇಲೆಮನೆ



















