ಭೋಪಾಲ್ : ಭಾರತೀಯ ಮೂಲದ ವಿದ್ಯಾರ್ಥಿಯನ್ನು ಕೆನಡಾದಲ್ಲಿ ಕಾಲೇಜು ಸಹಪಾಠಿಗಳೇ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮಧ್ಯ ಪ್ರದೇಶದ ಉಜ್ಜಯಿನಿ ಮೂಲದ 23 ವರ್ಷದ ಗುರ್ಕಿರತ್ ಸಿಂಗ್ ಮನೋಚಾ ಹತ್ಯೆಯಾದ ವಿದ್ಯಾರ್ಥಿ.
ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ತೆರಳಿದ್ದ ಗುರ್ಕಿರತ್ ಸಿಂಗ್ ಮನೋಚಾ ಅವರಿಗೆ ಮಾರ್ಚ್ 14ರಂದು ಫೋರ್ಟ್ ಸೇಂಟ್ ಜಾನ್ ನಗರದಲ್ಲಿ ಯುವಕರ ಗುಂಪೊಂದು ಹಲ್ಲೆ ನಡೆಸಿ, ವಾಹನದಿಂದ ಡಿಕ್ಕಿ ಹೊಡೆಸಿದೆ. ಇದರ ಪರಿಣಾಮ ಅವರು ಮೃತಪಟ್ಟಿದ್ದಾರೆಂದು ವರದಿಯಾಗಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಗುರ್ಕಿರತ್ ಸಿಂಗ್ ನಾರ್ದರ್ನ್ ಲೈಟ್ಸ್ ಕಾಲೇಜಿನಲ್ಲಿ ಬ್ಯುಸಿನೆಸ್ ಮ್ಯಾನೆಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆಯಲು ಕೆನಡಾಕ್ಕೆ ಪ್ರಯಾಣ ಬೆಳೆಸಿದ್ದರು.
ಮಧ್ಯ ಪ್ರದೇಶ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಈ ಘಟನೆಗೆ ಸಂತಾಪ ಸೂಚಿಸಿದ್ದು, ತೀವ್ರ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ. ಛತ್ತೀಸ್‌ಗಢದ ರಾಯ್‌ಪುರದಲ್ಲಿ ವಾಸಿಸುವ ಗುರ್ಕಿರತ್ ಸಿಂಗ್ ಅವರ ಹಿರಿಯ ಸಹೋದರ ಪ್ರಬ್ಕೀರತ್ ಸಿಂಗ್, ಈ ಸುದ್ದಿ ತಮಗೆ ಭೀಕರ ಆಘಾತವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.
ಗುರ್ಕೀರತ್ ಅವರ ಮೃತದೇಹವನ್ನು ಭಾರತಕ್ಕೆ ತರುವ ಪ್ರಕ್ರಿಯೆಯೂ ಆರಂಭವಾಗಿದೆ. ಕುಟುಂಬದ ಪ್ರಕಾರ, ಕಾನೂನುಕ್ರಮಗಳ ನಂತರ ವಾಪಸಾತಿಗೆ ಸುಮಾರು ಮೂರು ವಾರಗಳು ಬೇಕಾಗಬಹುದು. ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಹಾಯ ಮಾಡುವಂತೆ ಕುಟುಂಬವು ಸರ್ಕಾರಕ್ಕೆ ಮನವಿ ಮಾಡಿದೆ.
ಇದನ್ನೂ ಓದಿ : ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ ಕಂದಮ್ಮ


















