ಹೈದರಾಬಾದ್: ಜನನಿಬಿಡ ರಸ್ತೆಯಲ್ಲೇ 25 ವರ್ಷದ ಯುವಕನನ್ನು ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ನಡೆದಿದೆ.
ಈ ಆಘಾತಕಾರಿ ಘಟನೆ ಹೈದರಾಬಾದ್ ನ ಮೇಡ್ಚಲ್ ಪ್ರದೇಶದಲ್ಲಿ ನಡೆದಿದೆ. ಯುವಕನನ್ನು ಭಾನುವಾರ ಜನನಿಬಿಡ ಹೆದ್ದಾರಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ವರದಿಗಳ ಪ್ರಕಾರ, ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಕಾಮರೆಡ್ಡಿ ಜಿಲ್ಲೆಯ ಮಚ್ಚಾ ರೆಡ್ಡಿ ಗ್ರಾಮದ ನಿವಾಸಿ ಉಮೇಶ್ ಮೇಲೆ ದಾಳಿ ಮಾಡಿ ಕೊಲೆ ಮಾಡಿದ್ದಾರೆ. ಕೊಲೆಯಾಗಿರುವ ಯುವಕ ಕುಟುಂಬದೊಂದಿಗೆ ಮೇಡ್ಚಲ್‌ನಲ್ಲಿ ವಾಸಿಸುತ್ತಿದ್ದ ಎನಲಾಗಿದೆ.
ಈ ಕ್ರೂರ ಅಪರಾಧದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಡಹಗಲೇ ಈ ಆಘಾತಕಾರಿ ಕೊಲೆ ನಡೆದಿದ್ದು, ವಾಹನ ಸವಾರರು ಭಯಭೀತರಾಗಿ ದೂರದಲ್ಲಿಯೇ ವಾಹನ ನಿಲ್ಲಿಸಿದ್ದಾರೆ. ಕೊಲೆ ಮಾಡಿದ ನಂತರ ಇಬ್ಬರು ದುಷ್ಕರ್ಮಿಗಳು ಶಾಂತವಾಗಿ ರಸ್ತೆ ದಾಟಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಮೇಡ್ಚಲ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕೊಲೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮತ್ತೊಂದು ವೈರಲ್ ವೀಡಿಯೊದಲ್ಲಿ, ಉಮೇಶ್ ಅವರ ದೇಹವು ರಕ್ತದ ಮಡುವಿನಲ್ಲಿ ರಸ್ತೆಯ ಮೇಲೆ ಬಿದ್ದಿರುವುದನ್ನು ಕಾಣಬಹುದು. ಸ್ಥಳದಲ್ಲಿ ಕುಟುಂಬಸ್ಥರು ರೋದಿಸಿದ್ದಾರೆ.