ಬೆಂಗಳೂರು: ದುಷ್ಕರ್ಮಿಯೊಬ್ಬ ಲೇಡಿಸ್ ಪಿಜಿಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಮಾಡಿ ಪರಾರಿಯಾಗಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.
ಸಿಲಿಕಾನ್ ಸಿಟಿಯ ಕೋರಮಂಗಲದ ವಿ.ಆರ್.ಲೇಔಟ್ ನಲ್ಲಿ ಈ ಕೃತ್ಯ ನಡೆದಿದೆ. ಬಿಹಾರ ಮೂಲದ ಕೃತಿ ಕುಮಾರಿ (24) ಕೊಲೆಯಾಗಿರುವ ದುರ್ದೈವಿ. ಕೊಲೆಯಾಗಿರುವ ಯುವತಿ ಬಿಹಾರ ಮೂಲದವರಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಆರೋಪಿ ಯುವಕ ಮಂಗಳವಾರ ರಾತ್ರಿ ವೇಳೆ ಚಾಕುದೊಂದಿಗೆ ಪಿಜಿಗೆ ನುಗ್ಗಿ ಮೂರನೇ ಮಹಡಿ ಹತ್ತಿದ್ದಾನೆ. ಅಲ್ಲಿ ಯುವತಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿ, ಕತ್ತು ಕೊಯ್ದಿದ್ದಾನೆ. ಯುವತಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ನಡೆಯುತ್ತಿದ್ದಂತೆ ದುಷ್ಕರ್ಮಿ ಅಲ್ಲಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕೋರಮಂಗಲ ಪೊಲೀಸರು, ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪರಿಚಯಸ್ಥ ವ್ಯಕ್ತಿ ಈ ರೀತಿ ಮಾಡಿರಬಹುದು ಎಂದು ಶಂಕಿಸಲಾಗಿದೆ. ಕೋರಮಂಗಲ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ತನಿಖೆ ಕೈಗೊಂಡಿರುವ ಪೊಲೀಸರು ಯುವತಿಯ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗೆ ಬಲೆ ಬೀಸಿದ್ದಾರೆ.