ಆನೇಕಲ್: ವಿಶ್ವದಲ್ಲೇ ಮೊದಲ ಬಾರಿಗೆ ಕರಡಿಗೆ ಕೃತಕ ಕಾಲನ್ನು ಯಶಸ್ವಿಯಾಗಿ ಜೋಡಣೆ ಮಾಡಿರುವ ಅಪರೂಪದ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ವಸಿಕರನ್ ಎಂಬ ಕರಡಿಗೆ ವೈಲ್ಡ್ ಲೈಫ್ ಎಸ್ ಒ ಎಸ್ ಸಂಸ್ಥೆ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಕಳೆದ ಮೂರು ದಿನಗಳಿಂದ ಕೈಗೊಂಡಿದ್ದ ಕೃತಕ ಕಾಲು ಜೋಡಣೆ ಕಾರ್ಯ ಯಶಸ್ವಿಯಾಗಿದ್ದು, ಇದೀಗ ವಸಿಕರನ್ ಮೊದಲಿನಂತೆ ನಡೆಯಲು ಪ್ರಾರಂಭಿಸಿದೆ.
2019ರಲ್ಲಿ ಬೇಟೆಗಾರರ ಬಲೆಗೆ ಸಿಲುಕಿ ಜೀವನ್ಮರಣದ ಹೋರಾಟ ನಡೆಸಿದ್ದ ವಸಿಕರನ್ ಕರಡಿಯನ್ನು ಬಳ್ಳಾರಿ ಅರಣ್ಯ ಪ್ರದೇಶದಿಂದ ರಕ್ಷಣೆ ಮಾಡಲಾಗಿತ್ತು. ಈ ವೇಳೆ ಹಿಂಬದಿಯ ಎಡಗಾಲು ಮುರಿದು ಕರಡಿ ನರಳಾಡುತ್ತಿತ್ತು. ಗಾಯಗೊಂಡಿದ್ದ ವಸಿಕರನ್ ಅನ್ನು ಬನ್ನೇರುಘಟ್ಟ ಕರಡಿ ಆರೈಕೆ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು. ಬಳಿಕ ಆರೋಗ್ಯ ಸುಧಾರಣೆಯಾಗಿ, ಮೂರು ಕಾಲಿನಿಂದ ನಡೆಯಲು ಅಭ್ಯಾಸ ಮಾಡಿಕೊಂಡಿತ್ತು.
ಈ ಸಮಯದಲ್ಲಿ ಪ್ರಾಣಿಗಳ ಜಾಗತಿಕ ಮೂಳೆ ತಜ್ಞರಾದ ಅಮೆರಿಕದ ಡೆರಿಕ್ ಕಂಪನಾ ಬನ್ನೇರುಘಟ್ಟಕ್ಕೆ ಭೇಟಿ ನೀಡಿದ್ದರು. ಆಗ ಕರಡಿ ವಸಿಕರನ್ ಓಡಾಡುವುದನ್ನ ಗಮನಿಸಿದ್ದರು. ಬಳಿಕ ಮಣ್ಣು ತೋಡಲು, ಮರ ಹತ್ತಲು, ಮೇವು ಸಂಗ್ರಹಕ್ಕೆ ಕೃತಕ ಕಾಲನ್ನು ಸಿದ್ಧಪಡಿಸಿದರು. ಸದ್ಯ ಇದೀಗ ಕರಡಿ ಕೃತಕ ಕಾಲಿನಿಂದ ಮೊದಲಿನ ಹಾಗೆ ಓಡಾಡುತ್ತಿದೆ.
ಈ ಕುರಿತು ಡೆರಿಕ್ ಕಂಪನಾ ಅವರು ಪ್ರತಿಕ್ರಿಯಿಸಿದ್ದು, ಪ್ರಾಣಿ ಎಂಬುದು ನನಗೆ ಹೊಸ ವಿಷಯ ಕಲಿಸುತ್ತದೆ. ಆದರೆ, ವಸಿಕರನ್ ಪ್ರಕರಣದಲ್ಲಿ ಇದೊಂದು ಅತ್ಯದ್ಭುತವೇ ಹೌದು. ಕರಡಿಗೆ ಕೃತಕ ಕಾಲು ಸಿದ್ಧಪಡಿಸುವುದು ದೊಡ್ಡ ಸವಾಲಾಗಿತ್ತು. ಆದರೆ, ವಸಿಕರನ್ ನಡಿಗೆಯನ್ನು ಕಂಡು ನಮ್ಮ ಶ್ರಮಕ್ಕೆ ಬೆಲೆ ಸಿಕ್ಕಂತಾಗಿದೆ ಎಂದಿದ್ದಾರೆ.