ಬೆಂಗಳೂರು: ಉದ್ಯಮಿಗಳು, ವ್ಯಾಪಾರಿಗಳು ಸೇರಿ ಯಾರಿಗೇ ಆಗಲಿ ಈಗ ಚೆಕ್ ಕ್ಲಿಯರೆನ್ಸ್ ಮಾಡಿಕೊಳ್ಳುವುದೇ ತಲೆನೋವಾಗಿದೆ. ಯುಪಿಐ ಕಾಲದಲ್ಲೂ ಯಾರಾದರೂ ಚೆಕ್ ಕೊಟ್ಟರೆ, ಅದನ್ನು ಬ್ಯಾಂಕಿಗೆ ಕೊಟ್ಟ ಬಳಿಕ ಖಾತೆಗೆ ಜಮೆಯಾಗಲು 2-3 ಕೆಲಸದ ದಿನಗಳು (ವರ್ಕಿಂಗ್ ಡೇಸ್) ಬೇಕಾಗುತ್ತದೆ. ಇದನ್ನು ಮನಗಂಡಿರುವ ಭಾರತೀಯ ರಿಸರ್ವ್ ಬ್ಯಾಂಕ್, ಹೊಸ ನಿಯಮ ಜಾರಿಗೆ ತಂದಿದೆ. ಚೆಕ್ ಹಾಕಿದ ನಾಲ್ಕೈದು ಗಂಟೆಯಲ್ಲಿಯೇ ಗ್ರಾಹಕರ ಖಾತೆಗೆ ಹಣ ಜಮೆಯಾಗಬೇಕು ಎಂದು ಆರ್ ಬಿ ಐ ಸೂಚಿಸಿದೆ.
ಅಕ್ಟೋಬರ್ 4ರಿಂದಲೇ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಕೂಡ ಆರ್ ಬಿ ಐ ಮಾಹಿತಿ ನೀಡಿದೆ. ಬ್ಯಾಂಕ್ ಗಳು ಶಾಖೆಗಳಲ್ಲಿ ಸ್ವೀಕರಿಸಿದ ಚೆಕ್ ಗಳನ್ನು ಸ್ಕ್ಯಾನ್ ಮಾಡಿ ತಕ್ಷಣವೇ ಕ್ಲಿಯರಿಂಗ್ ಹೌಸ್ ಗೆ ಕಳುಹಿಸಬೇಕು. ಪ್ರತಿ ಚೆಕ್ ಗಾಗಿ ಗ್ರಾಹಕರಿಗೆ ಬ್ಯಾಂಕ್ ಧನಾತ್ಮಕ ಅಥವಾ ಋಣಾತ್ಮಕ ದೃಢೀಕರಣ ನೀಡಬೇಕು. ಧನಾತ್ಮಕ ದೃಢೀಕರಣವು ಚೆಕ್ ಪಾವತಿ ತ್ವರಿತವಾಗಿ ನಡೆಯಲು ಸಹಾಯ ಮಾಡುತ್ತದೆ, ಋಣಾತ್ಮಕ ದೃಢೀಕರಣವು ಅನಧಿಕೃತ ಚೆಕ್ ಗಳನ್ನು ತಡೆಯುತ್ತದೆ.
ಈಗಿರುವ ಚೆಕ್ ಟ್ರಂಕೇಶನ್ ಸಿಸ್ಟಮ್ (ಸಿಟಿಎಸ್) ಈಗಿನ ಬ್ಯಾಚ್ ಸಂಸ್ಕರಣೆಯ ವಿಧಾನದಿಂದ ‘ಆನ್-ರಿಯಲೈಸ್‌ಮೆಂಟ್-ಸೆಟಲ್‌ಮೆಂಟ್’ ನಿರಂತರ ಕ್ಲಿಯರಿಂಗ್ ಗೆ ಪರಿವರ್ತಿಸಲಾಗಿದೆ. ಈ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ಜಾರಿಗೆ ತರಲಾಗಿದೆ. ಈ ಹೊಸ ನಿರಂತರ ಚೆಕ್ ಕ್ಲಿಯರಿಂಗ್ ವ್ಯವಸ್ಥೆಯಿಂದ ಬ್ಯಾಂಕ್ ಗಳಿಗೆ ಮತ್ತು ಗ್ರಾಹಕರಿಗೆ ಹಲವಾರು ಲಾಭಗಳು ದೊರಕಲಿದೆ.
ಪ್ರಕ್ರಿಯೆ ವೇಗವಾಗಿ ನಡೆಯುವುದರಿಂದ ಪಾವತಿಗಳು ತ್ವರಿತವಾಗಿ ಪೂರ್ಣಗೊಳ್ಳುತ್ತವೆ. ಬ್ಯಾಂಕ್ ಗಳು ತಮ್ಮ ಹಣಕಾಸು ನಿರ್ವಹಣೆಯಲ್ಲಿ ಹೆಚ್ಚು ದಕ್ಷರಾಗುತ್ತವೆ ಮತ್ತು ಗ್ರಾಹಕರಿಗೆ ಶೀಘ್ರ, ಸುರಕ್ಷಿತ ಪಾವತಿ ಅನುಭವ ಸಿಗುತ್ತದೆ. ಅದರಲ್ಲೂ, ಸಣ್ಣಹಾಗೂ ಮಧ್ಯಮ ವರ್ಗದ ವ್ಯಾಪಾರಿಗಳಿಗೆ ಇದು ಹೆಚ್ಚು ಅನುಕೂಲಕಾರಿಯಾಗಲಿದೆ.
]



















