ಬೆಂಗಳೂರು: ಬ್ಯಾಂಕ್ ಅಧಿಕಾರಿಯೊಬ್ಬಳು ವೃದ್ಧ ಮಹಿಳೆಗೆ ಬರೋಬ್ಬರಿ 50 ಲಕ್ಷ ರೂ. ವಂಚಿಸಿರುವ ಘಟನೆಯೊಂದು ನಡೆದಿದೆ.
ಈ ಪ್ರಕರಣದಲ್ಲಿ ಬ್ಯಾಂಕ್ ಮಹಿಳಾ ಅಧಿಕಾರಿಯೊಂದಿಗೆ ನಾಲ್ವರು ಕೂಡ ಶಾಮೀಲಾಗಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿನಗರ ಪೊಲೀಸರು (Girinagar Police) ಬ್ಯಾಂಕ್ ನ ಉಪ ವ್ಯವಸ್ಥಾಪಕಿ ಮೇಘನಾ, ಆಕೆಯ ಪತಿ ಶಿವಪ್ರಸಾದ್, ವರದರಾಜು, ಅನ್ವರ್ ಘೋಷ್ ಬಂಧಿಸಿದ್ದಾರೆ.
ಗಿರಿನಗರದಲ್ಲಿರುವ ಇಂಡಸ್ ಇಂಡ್ ಬ್ಯಾಂಕ್ ನಲ್ಲಿ ಈ ವಂಚನೆ ನಡೆದಿದೆ. ಬ್ಯಾಂಕ್ ನ ಉಪ ವ್ಯವಸ್ಥಾಪಕಿ ಮ್ಯಾನೇಜರ್ ಮೇಘನಾ ಎಫ್ ಡಿ ಅಕೌಂಟ್ ಮಾಡಿದ್ದಾಗಿ ಸುಳ್ಳು ಹೇಳಿ ಆರ್ ಟಿಜಿಎಸ್ ಕಾಗದಕ್ಕೆ ಸಹಿ ಮಾಡಿಸಿಕೊಂಡಿದ್ದಾಳೆ. ಬಳಿಕ ತಮ್ಮ ಹೊಸ ಬ್ಯಾಂಕ್ ಖಾತೆ ತೆಗೆದು ಆರ್ಟಿಜಿಎಸ್ ಮುಖಾಂತರ 50 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾಳೆ.
ವೃದ್ಧ ದಂಪತಿ ಗಿರಿನಗರದಲ್ಲಿನ ಇಂಡಸ್ ಇಂಡ್ ಬ್ಯಾಂಕ್ನಲ್ಲಿ ಜಂಟಿ ಖಾತೆ ತೆರೆದಿದ್ದರು. ಎಫ್ ಡಿ ಖಾತೆ ಕೂಡ ಹೊಂದಿದ್ದಾರೆ. ವೃದ್ಧೆಗೆ ಮೇಘನಾ ಬ್ಯಾಂಕ್ ವ್ಯವಹಾರದಲ್ಲಿ ಸಹಾಯ ಪರಿಚಯವಾಗಿದ್ದಳು. ಹೀಗಾಗಿ ವೃದ್ಧೆ, ಮೇಘನಾಗೆ ತನ್ನ ವೈಯಕ್ತಿಕ ವಿಚಾರಗಳನ್ನು ಕೂಡ ಹೇಳಿಕೊಂಡಿದ್ದರು.
ಚಾಮರಾಜಪೇಟೆಯಲ್ಲಿನ ಮನೆ ಮಾರಿರುವ ವಿಚಾರ ಕೂಡ ಹೇಳಿದ್ದರು. ಮನೆ ಮಾರಾಟದಿಂದ ವೃದ್ಧ ದಂಪತಿಯ ಬ್ಯಾಂಕ್ ಖಾತೆಗೆ ಒಂದು ಕೋಟಿ ಹಣ ಜಮೆಯಾಗಿತ್ತು. ಒಮ್ಮೆ ವೃದ್ಧೆ ಬ್ಯಾಂಕ್ಗೆ ಹೋದಾಗ ಎರಡು ಬಾಂಡ್ ಅವಧಿ ಮುಗಿದಿದೆ ಎಂದು ಮೇಘನಾ ಹೇಳಿದ್ದಾಳೆ. ಹೊಸ ಬಾಂಡ್ ಖರೀದಿಗೆ ದಾಖಲಾತಿ ಮತ್ತು ಚೆಕ್ ಅವಶ್ಯಕತೆ ಇದೆ ಎಂದಿದ್ದಾಳೆ. ಆಗ ಮೇಘನಾ, ವೃದ್ಧೆ ಮನೆಗೆ ತೆರಳಿ ಎರಡು ಖಾಲಿ ಚೆಕ್ ಮೇಲೆ ಸಹಿ ಮಾಡಿಸಿಕೊಂಡಿದ್ದಾಳೆ.
ಜೊತೆಗೆ, ಒಂದಿಷ್ಟು ಕಾಗದ ಪತ್ರಗಳಿಗೂ ಸಹಿ ಪಡೆದಿದ್ದಾಳೆ. ಎಫ್ಡಿ ಬದಲಾಗಿ ಆರ್ ಟಿಜಿಎಸ್ ಪತ್ರಕ್ಕೂ ಸಹಿ ಪಡೆದಿದ್ದಾಳೆ. ಆನಂತರ ವೃದ್ಧೆ ಅಕೌಂಟ್ ಪರಿಶೀಲಿಸಿದಾಗ ಹಣ ಕಡಿಮೆ ಇರುವುದು ಪತ್ತೆಯಾಗಿದೆ. ಆನಂತರ ಬ್ಯಾಂಕ್ ನಿಂದ ಬಂದಿದ್ದ ಮೆಸೆಜ್ ಗಳ ಪರಿಶೀಲನೆ ನಡೆಸಿದ್ದಾರೆ. ಆಗ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಗಿರಿನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.