ಬೆಂಗಳೂರು: ಬ್ಯಾಂಕ್ ಉದ್ಯೋಗಿಯೊಬ್ಬರು ತಮ್ಮದೇ ಫ್ಲಾಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಸಿಲಿಕಾನ್ ಸಿಟಿಯ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ವಿವೇಕ್ ಸಮದರ್ಶಿ ಆತ್ಮಹತ್ಯೆ ಮಾಡಿಕೊಂಡಿರುವ ಉದ್ಯೋಗಿ ಎನ್ನಲಾಗಿದೆ. ವಿವೇಕ್, ಐಸಿಐಐಸಿಐ ಬ್ಯಾಂಕ್ ನಲ್ಲಿ ಲೋನ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರು.
ಆದರೆ, ಇತ್ತೀಚೆಗೆ ಮೇಲಾಧಿಕಾರಿಯಿಂದ ಕಿರುಕುಳ ಹೆಚ್ಚಾದ ಹಿನ್ನೆಲೆಯಲ್ಲಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಪತ್ನಿಗೆ ಕೂಡ ವಿವೇಕ್, ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ತನ್ನ ಮೇಲೆ ನಡೆಯುತ್ತಿರುವ ಕಿರುಕುಳದ ಬಗ್ಗೆ ಕೂಡ ಹೇಳಿಕೊಂಡಿದ್ದರು. ವಿಡಿಯೋ ಕಾಲ್ ನಲ್ಲಿದ್ದುಕೊಂಡೇ ವಿವೇಕ್ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಕೂಡಲೇ ವಿವೇಕ್ ಸ್ನೇಹಿತರಿಗೆ ಪತ್ನಿ ಸುದ್ದಿ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆ ಆಗಿಲ್ಲ. ಈ ಕುರಿತು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.