ಬೆಂಗಳೂರು: ದೇಶದ ಕೋಟ್ಯಂತರ ಬ್ಯಾಂಕ್ ಗ್ರಾಹಕರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಯಾವುದೇ ಬ್ಯಾಂಕ್ ಖಾತೆಗೆ ಗರಿಷ್ಠ 4 ಮಂದಿಯನ್ನು ನಾಮನಿರ್ದೇಶನ ಮಾಡುವ ಹೊಸ ನಿಯಮವು ನವೆಂಬರ್ 1ರಿಂದ ಜಾರಿಗೆ ಬರಲಿದೆ. ಅಲ್ಲಿಗೆ, ಬ್ಯಾಂಕ್ ಖಾತೆಗೆ ಇನ್ನುಮುಂದೆ ನಾಲ್ವರನ್ನು ನಾಮಿನಿಗಳನ್ನಾಗಿ ಸೇರಿಸಬಹುದಾಗಿದೆ. ಇದರಿಂದಾಗಿ, ಖಾತೆದಾರರ ಹಣವನ್ನು ಬೇರೆಯವರು ಕ್ಲೇಮ್ ಮಾಡಲು, ಯಾರಿಗೆ ಎಷ್ಟು ಹಣ ಸೇರಬೇಕು ಎಂಬುದನ್ನು ಖಾತೆದಾರರು ಮೊದಲೇ ತೀರ್ಮಾನಿಸಲು ಸಾಧ್ಯವಾಗಲಿದೆ.
ಕೇಂದ್ರ ಸರ್ಕಾರವು ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಕಾಯ್ದೆ-2025ಅನ್ನು ಜಾರಿಗೆ ತರುತ್ತಿದೆ. ನವೆಂಬರ್ 1ರಿಂದ ನೂತನ ಕಾಯ್ದೆ ಜಾರಿಗೆ ಬರಲಿದೆ. ಅದರಂತೆ, ಬ್ಯಾಂಕ್ ಖಾತೆಗಳಿಗೆ ಖಾತೆದಾರರು ಗರಿಷ್ಠ ನಾಲ್ವರ ಹೆಸರನ್ನು ನಾಮನಿರ್ದೇಶನ ಮಾಡಬಹುದು. ಎಲ್ಲ ನಾಲ್ಕು ಹೆಸರುಗಳನ್ನು ಒಂದೇ ಬಾರಿಗೆ ಅಥವಾ ಒಂದಾದ ನಂತರ ಇನ್ನೊಂದರಂತೆ ನಾಮನಿರ್ದೇಶನ ಮಾಡಲು ಅವಕಾಶ ಇದೆ.
ಹಾಗೆಯೇ, ಅಕಸ್ಮಾತ್ ನಿಧನರಾದರೆ, ಖಾತೆಯ ಹಣದಲ್ಲಿ ಯಾವ ನಾಮಿನಿಗೆ ಎಷ್ಟು ಹಣ ಸೇರಬೇಕು ಎಂಬುದನ್ನು ಕೂಡ ನಮೂದಿಸಬಹುದಾಗಿದೆ. ಠೇವಣಿದಾರರ ಹಾಗೂ ನಾಮನಿರ್ದೇಶಿತ ವ್ಯಕ್ತಿಗಳ ಕ್ಲೇಮ್ ಇತ್ಯರ್ಥವು ಇನ್ನುಮುಂದೆ ಸರಳವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಲಾಕರ್ ಗಳಲ್ಲಿ ಇರುವ ವಸ್ತುಗಳಿಗೆ ಒಬ್ಬರ ನಂತರ ಇನ್ನೊಬ್ಬರ ಹೆಸರನ್ನು ನಾಮನಿರ್ದೇಶನ ಮಾಡಲು ಮಾತ್ರ ಅವಕಾಶ ಇದೆ. ಹೊಸ ನಿಯಮಗಳ ಜಾರಿಯಿಂದಾಗಿ ಯಾವುದೇ ಗೌಜು ಗೊಂದಲ ಇಲ್ಲದೇ ನಿಗದಿತ ಹಣಕಾಸಿನ ಭಾಗವು ಆ ನಾಮಿನಿಗಳಿಗೆ ನೇರವಾಗಿ ವರ್ಗಾವಣೆ ಆಗಲಿದೆ.



















