ಹಾಸನ: ನಕಲಿ ದಾಖಲೆ ಸೃಷ್ಟಿಸಿ ರಾಜ್ಯಕ್ಕೆ ಅಕ್ರಮವಾಗಿ ಬಾಂಗ್ಲಾ ಪ್ರಜೆಗಳು ಆಗಮಿಸುತ್ತಿದ್ದು, ಪ್ರಕರಣ ಬೇಧಿಸಿರುವ ಪೊಲೀಸರು ಓರ್ವ ಅಧಿಕಾರಿಯನ್ನು ಬಂಧಿಸಿದ್ದಾರೆ.
ಆಸ್ಸಾಂ (Assam) ರಾಜ್ಯದ ಮೂಲದವರು ಎಂದು ಹೇಳಿಕೊಂಡು ನಕಲಿ ದಾಖಲೆ ಸೃಷ್ಟಿಸಿ (Bangladesh) ಅಕ್ರಮವಾಗಿ ಹಾಸನ ಜಿಲ್ಲೆಯಲ್ಲಿ ನೆಲೆಯೂರಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಕೂಲಿ ಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾದೇಶದಿಂದ ಬರುವ ಅಕ್ರಮ ವಲಸಿಗರು ಜಿಲ್ಲೆಯ ಆಲೂರು, ಬೇಲೂರು, ಸಕಲೇಶಪುರ, ಅರಕಲಗೂಡು ಭಾಗದಲ್ಲಿ ನೆಲಸಿದ್ದಾರೆ. ಕೂಡಲೇ ಸ್ಥಳೀಯರು ಬಾಂಗ್ಲಾ ವಲಸಿಗರು ಇದ್ದರೆ ಮಾಹಿತಿ ನೀಡಬೇಕು ಎಂದು ಪೊಲೀಸರು ಹೇಳಿದ್ದಾರೆ.
ಆಸ್ಸಾಂ ಮೂಲದವರೆಂದು ನಕಲಿ ಆದಾರ್ ಕಾರ್ಡ್ ತೋರಿಸಿ, ವಿವಿಧೆಡೆ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಮಾಲೀಕರು ಕಾರ್ಮಿಕರ ಅನಿವಾರ್ಯತೆಯಿಂದ ಕೆಲಸ ನೀಡಿ ಇಟ್ಟುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಕಾರ್ಮಿಕರ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಕೆಲವು ಏಜೆಂಟ್ ರು ಬಾಂಗ್ಲಾದೇಶದ ಜನರನ್ನು ಕರೆತಂದು, ಆಸ್ಸಾಂ ಮೂಲದವರು ಎಂದು ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದ್ದಾರೆ ಎನ್ನಲಾಗಿದೆ. 5 ರಿಂದ 10 ಸಾವಿರ ರೂ. ಹಣ ಪಡೆದು ನಕಲಿ ಆಧಾರ್ ಕಾರ್ಡ್ ಸೃಷ್ಟಿ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲೇ ನಕಲಿ ಕಾರ್ಡ್ ವಿತರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಇವರ ಆದಾರ್ ಕಾರ್ಡ್ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಯಾವುದೇ ಮಾಹಿತಿ ದೊರೆಯದಿದ್ದಾಗ ಅನುಮಾನ ಗಾಢವಾಗಿದೆ. ಗಂಡು, ಹೆಣ್ಣು ಕಲಂನಲ್ಲಿಯೂ ತಪ್ಪು ಮಾಹಿತಿಗಳನ್ನು ತೋರಿಸಿಲಾಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಧಾರ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಅನುಶ್ರೀ ಎಂಬ ಮಹಿಳೆಯನ್ನು ಬಂಧಿಸಲಾಗಿದ್ದು, ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ.