ಗುವಾಹಟಿ: ಅಸ್ಸಾಂನ ಕಾಂಗ್ರೆಸ್ ಸಭೆಯೊಂದರಲ್ಲಿ ಬಾಂಗ್ಲಾದೇಶದ ರಾಷ್ಟ್ರಗೀತೆ “ಅಮರ್ ಸೋನಾರ್ ಬಾಂಗ್ಲಾ” ಹಾಡಲಾಗಿದ್ದು, ಈ ಘಟನೆಯು ರಾಜ್ಯದಲ್ಲಿ ಭಾರೀ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಘಟನೆಯನ್ನು ‘ದೇಶದ್ರೋಹ’ ಎಂದು ಕರೆದಿರುವ ಆಡಳಿತಾರೂಢ ಬಿಜೆಪಿ, ಇದು ಕಾಂಗ್ರೆಸ್‌ನ “ಬೃಹತ್ ಬಾಂಗ್ಲಾದೇಶ” ನಿರ್ಮಾಣದ ಮತ್ತು ವೋಟ್ ಬ್ಯಾಂಕ್ ರಾಜಕೀಯದ ಅಜೆಂಡಾದ ಭಾಗ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದೆ.
ಸೋಮವಾರ ಅಸ್ಸಾಂನ ಬಾಂಗ್ಲಾ ಗಡಿಗೆ ಹೊಂದಿಕೊಂಡಿರುವ ಕರೀಂಗಂಜ್ (ಈಗಿನ ಶ್ರೀಭೂಮಿ) ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ಸೇವಾದಳದ ಕಾರ್ಯಕ್ರಮದಲ್ಲಿ, ಹಿರಿಯ ಕಾಂಗ್ರೆಸ್ ನಾಯಕ ಬಿಧು ಭೂಷಣ್ ದಾಸ್ ಅವರು ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನು ಹಾಡಿದ್ದಾರೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಅಸ್ಸಾಂ ಸಚಿವ ಅಶೋಕ್ ಸಿಂಘಾಲ್, “ಭಾರತದ ಈಶಾನ್ಯ ಭಾಗವನ್ನು ಪ್ರತ್ಯೇಕಿಸಲು ಬಯಸುವ ದೇಶದ ರಾಷ್ಟ್ರಗೀತೆಯನ್ನು ಕಾಂಗ್ರೆಸ್ ಸಭೆಯಲ್ಲಿ ಹಾಡಲಾಗಿದೆ. ದಶಕಗಳಿಂದ ಅಸ್ಸಾಂನಲ್ಲಿ ಅಕ್ರಮ ವಲಸಿಗರಿಗೆ ಕಾಂಗ್ರೆಸ್ ಏಕೆ ಪ್ರೋತ್ಸಾಹ ನೀಡಿತು ಎಂಬುದು ಈಗ ಸ್ಪಷ್ಟವಾಗಿದೆ. ಅಸ್ಸಾಂನ ಜನಸಂಖ್ಯೆಯನ್ನು ಬದಲಾಯಿಸಿ, ವೋಟ್ ಬ್ಯಾಂಕ್ ಸೃಷ್ಟಿಸಿ ‘ಬೃಹತ್ ಬಾಂಗ್ಲಾದೇಶ’ ನಿರ್ಮಿಸುವುದೇ ಅವರ ಉದ್ದೇಶ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಸ್ಸಾಂ ಬಿಜೆಪಿ ಘಟಕವು ಕಾಂಗ್ರೆಸ್ ಅನ್ನು “ಬಾಂಗ್ಲಾದೇಶದ ಗೀಳು ಹಿಡಿದ ಪಕ್ಷ” ಎಂದು ಜರಿದಿದೆ.
ಇತ್ತೀಚೆಗಷ್ಟೇ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರು, ಭಾರತದ ಈಶಾನ್ಯ ರಾಜ್ಯಗಳನ್ನು ಬಾಂಗ್ಲಾದ ಭಾಗವೆಂದು ತೋರಿಸುವ ವಿವಾದಾತ್ಮಕ ನಕ್ಷೆಯಿದ್ದ ಪುಸ್ತಕವನ್ನು ಪಾಕಿಸ್ತಾನಿ ಜನರಲ್‌ಗೆ ಉಡುಗೊರೆಯಾಗಿ ನೀಡಿದ್ದರು. ಆ ಘಟನೆಯ ಬೆನ್ನಲ್ಲೇ ಈ ವಿಡಿಯೋ ವೈರಲ್ ಆಗಿರುವುದು, ಬಿಜೆಪಿಯ ಆರೋಪಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಆದರೆ, ಕಾಂಗ್ರೆಸ್ ಈ ಆರೋಪಗಳನ್ನು “ರಾಜಕೀಯ ಪ್ರೇರಿತ” ಎಂದು ತಳ್ಳಿಹಾಕಿದೆ. ಕಾಂಗ್ರೆಸ್ ಮುಖಂಡರ ಪ್ರಕಾರ, ಬಿಧು ಭೂಷಣ್ ದಾಸ್ ಅವರು ಹಾಡಿದ್ದು ಕೇವಲ ರವೀಂದ್ರನಾಥ ಟ್ಯಾಗೋರರು ಬರೆದ ‘ರವೀಂದ್ರ ಸಂಗೀತ’ವೇ ಹೊರತು, ಬಾಂಗ್ಲಾದೇಶದ ರಾಷ್ಟ್ರಗೀತೆಯಾಗಿ ಅಲ್ಲ. “ಅಮರ್ ಸೋನಾರ್ ಬಾಂಗ್ಲಾ” ಗೀತೆಯನ್ನು ಟ್ಯಾಗೋರರು 1905ರಲ್ಲಿ ಬಂಗಾಳ ವಿಭಜನೆಯನ್ನು ವಿರೋಧಿಸಿ ಬರೆದಿದ್ದರು. ನಂತರ 1971ರಲ್ಲಿ ಬಾಂಗ್ಲಾದೇಶವು ಇದನ್ನು ತನ್ನ ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿತು. ಬಂಗಾಳಿ ಭಾಷಿಕರು ಹೆಚ್ಚಾಗಿರುವ ಗಡಿ ಪ್ರದೇಶಗಳಲ್ಲಿ ಈ ಗೀತೆಯನ್ನು ಸಾಂಸ್ಕೃತಿಕವಾಗಿ ಹಾಡುವುದು ಸಾಮಾನ್ಯ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಹಲವರು ಇದನ್ನು “ದೇಶದ್ರೋಹದ ಕೃತ್ಯ” ಎಂದು ಕರೆದು, ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅಸ್ಸಾಂನಲ್ಲಿ ರಾಷ್ಟ್ರೀಯತೆ, ಪ್ರಾದೇಶಿಕ ಅಸ್ಮಿತೆ ಮತ್ತು ರಾಜಕೀಯದ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಬ್ರೆಜಿಲ್‌ನಲ್ಲಿ ಡ್ರಗ್ಸ್ ಮಾಫಿಯಾ ಗ್ಯಾಂಗ್-ಪೊಲೀಸರ ನಡುವೆ ಫೈರಿಂಗ್ | 64 ಮಂದಿ ಸಾವು!



















