ನವದೆಹಲಿ : ಬಾಂಗ್ಲಾದೇಶದಲ್ಲಿ ಕಳೆದ ವರ್ಷ ನಡೆದಿದ್ದ ಹಿಂದೂ ಪೊಲೀಸ್ ಅಧಿಕಾರಿಯೊಬ್ಬರ ಭೀಕರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯೊಬ್ಬ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆರೆಸಿಕ್ಕಿದ್ದಾನೆ. ಅಹ್ಮದ್ ರಜಾ ಹಸನ್ ಮೆಹದಿ ಎಂಬ ಹೆಸರಿನ ಈ ವಿದ್ಯಾರ್ಥಿ ನಾಯಕ, ಭಾರತದ ಮೂಲಕ ಯುರೋಪ್‌ಗೆ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ಭದ್ರತಾ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಂಧಿತ ಆರೋಪಿಯನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಚೌಧರಿ ಹತ್ಯೆ ಆರೋಪಿ
ಬಾಂಗ್ಲಾದೇಶದ ಹಬಿಗಂಜ್ ನಿವಾಸಿಯಾದ ಮೆಹದಿ, ಕಳೆದ ವರ್ಷ ಆಗಸ್ಟ್ 5ರಂದು ನಡೆದಿದ್ದ ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಚೌಧರಿ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ. ಶೇಖ್ ಹಸೀನಾ ಸರ್ಕಾರ ಪತನಗೊಂಡ ದಿನ ನಡೆದಿದ್ದ ಭೀಕರ ಹಿಂಸಾಚಾರದ ವೇಳೆ, ಬನಿಯಾಚಾಂಗ್ ಪೊಲೀಸ್ ಠಾಣೆಯ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಸಂತೋಷ್ ಚೌಧರಿ ಅವರ ಮೇಲೆ ಮುಗಿಬಿದ್ದ ಗುಂಪು, ತೀವ್ರ ಹಲ್ಲೆ ನಡೆಸಿ ಅವರನ್ನು ಹತ್ಯೆಗೈದಿತ್ತು. ನಂತರ, ಅವರ ಮೃತದೇಹವನ್ನು ಮರವೊಂದಕ್ಕೆ ನೇತುಹಾಕಲಾಗಿತ್ತು. ವಿಶೇಷವೆಂದರೆ, ಈ ಹತ್ಯೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಮೆಹದಿಯ ವಿಡಿಯೋವೊಂದು ಈ ಹಿಂದೆ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಕಳೆದ ವರ್ಷ ಆಗಸ್ಟ್‌ನಲ್ಲಿ ಮೀಸಲಾತಿ ವಿರೋಧಿ ಪ್ರತಿಭಟನೆ ತೀವ್ರಗೊಂಡಿದ್ದಾಗ, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಬನಿಯಾಚಾಂಗ್ ಪೊಲೀಸ್ ಠಾಣೆಯತ್ತ ಮೆರವಣಿಗೆ ನಡೆಸಿದ್ದರು. ಈ ವೇಳೆ ನಡೆದ ಸಂಘರ್ಷದಲ್ಲಿ ಪೊಲೀಸರು ಗುಂಡು ಹಾರಿಸಿದಾಗ 6 ಮಂದಿ ಸಾವನ್ನಪ್ಪಿದ್ದರು. ಇದರಿಂದ ಆಕ್ರೋಶಗೊಂಡ ಉದ್ರಿಕ್ತ ಗುಂಪು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿತ್ತು. ಈ ಬೆಂಕಿಯಲ್ಲಿ ಹಲವು ಪೊಲೀಸರು ಸಿಲುಕಿಕೊಂಡಿದ್ದರು. ಇದೇ ವೇಳೆ ಗುಂಪು ಸಂತೋಷ್ ಚೌಧರಿ ಅವರನ್ನು ಹಿಡಿದು ಹಲ್ಲೆ ನಡೆಸಿ, ಕೊಂದಿತ್ತು.
ಸಂತೋಷ್ ಚೌಧರಿ ಅವರು ಹತ್ಯೆಯಾಗುವ ಒಂದು ವರ್ಷದ ಹಿಂದಷ್ಟೇ ವಿವಾಹವಾಗಿದ್ದರು. ಅವರು ಮೃತಪಟ್ಟ ಮೂರು ತಿಂಗಳ ನಂತರ ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆ ಮಗು ತನ್ನ ತಂದೆಯನ್ನು ನೋಡುವ ಮೊದಲೇ ಚೌಧರಿ ಅವರು ಹಿಂಸಾಚಾರಕ್ಕೆ ಬಲಿಯಾಗಿದ್ದರು. ಹೆತ್ತವರಿಗೆ ಚೌಧರಿ ಏಕಮಾತ್ರ ಪುತ್ರನಾಗಿದ್ದರು.
ಇದನ್ನೂ ಓದಿ : ಹಲ್ಲು ನೋವೆಂದು ಆಸ್ಪತ್ರೆಗೆ ಹೋದವಳು ಕೋಮಾಗೆ!



















