ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ(Pahalgam Attack) ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ಮೇಲೇನಾದರೂ ಭಾರತ ದಾಳಿ ಮಾಡಿದರೆ, ಚೀನಾದ ನೆರವು ಪಡೆದ ಬಾಂಗ್ಲಾದೇಶವು ಭಾರತದ ಈಶಾನ್ಯ ರಾಜ್ಯಗಳನ್ನು ಆಕ್ರಮಿಸಿಕೊಳ್ಳಬೇಕು ಎಂದು ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಅವರ ಆಪ್ತ ಸಹಾಯಕ, ಮಾಜಿ ಸೇನಾಧಿಕಾರಿ ಮೇಜರ್ ಜನರಲ್ (ನಿವೃತ್ತ) ಎಎಲ್ಎಂ ಫಜ್ಲುಲ್ ರೆಹಮಾನ್ ನಾಲಿಗೆ ಹರಿಬಿಟ್ಟಿದ್ದಾರೆ.
ಫಜ್ಲುರ್ ರೆಹಮಾನ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ, ಈ ರೀತಿ ಪೋಸ್ಟ್ ಮಾಡಿದ್ದಾರೆ. ಆದರೆ, ಯೂನುಸ್ ಅವರ ಮಧ್ಯಂತರ ಸರ್ಕಾರ ರೆಹಮಾನ್ ಅವರ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.
ಮಂಗಳವಾರ ಫೇಸ್ಬುಕ್ ಪೋಸ್ಟ್‌ನಲ್ಲಿ ರೆಹಮಾನ್, “ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಬಾಂಗ್ಲಾದೇಶವು ಈಶಾನ್ಯ ಭಾರತದ ಏಳು ರಾಜ್ಯಗಳನ್ನು ಆಕ್ರಮಿಸಿಕೊಳ್ಳಬೇಕು. ಇದಕ್ಕೆ ಚೀನಾದ ಸಹಾಯ ಪಡೆಯಬೇಕು” ಎಂದು ಬಂಗಾಳಿ ಭಾಷೆಯಲ್ಲಿ ಬರೆದಿದ್ದಾರೆ.
“ಈ ನಿಟ್ಟಿನಲ್ಲಿ ಜಂಟಿ ಸೇನಾ ವ್ಯವಸ್ಥೆ ರೂಪಿಸುವ ಕುರಿತು ಚೀನಾದೊಂದಿಗೆ ನಾವು ಚರ್ಚೆಗಳನ್ನು ಪ್ರಾರಂಭಿಸುವುದು ಅಗತ್ಯ ಎಂದು ನಾನು ಭಾವಿಸುತ್ತೇನೆ” ಎಂದೂ ಬರೆದುಕೊಂಡಿದ್ದಾರೆ.
2009ರ ಬಾಂಗ್ಲಾದೇಶ ರೈಫಲ್ಸ್ ದಂಗೆಯಲ್ಲಿ ನಡೆದ ಹತ್ಯೆಗಳ ತನಿಖೆಗಾಗಿ ನಿಯೋಜಿಸಲಾದ ರಾಷ್ಟ್ರೀಯ ಸ್ವತಂತ್ರ ಆಯೋಗದ ಅಧ್ಯಕ್ಷರಾಗಿ ರೆಹಮಾನ್ ಅವರನ್ನು 2024ರ ಡಿಸೆಂಬರ್‌ನಲ್ಲಿ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ನೇಮಿಸಿತ್ತು.
ಇದೇ ವೇಳೆ, ಮಾಜಿ ಸೇನಾಧಿಕಾರಿಯ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಈ ಕುರಿತು ಸ್ಪಷ್ಟನೆ ನೀಡಿದ್ದು, “ಈ ಹೇಳಿಕೆಗಳು ಬಾಂಗ್ಲಾದೇಶ ಸರ್ಕಾರದ ನಿಲುವು ಅಥವಾ ನೀತಿಗಳನ್ನು ಪ್ರತಿಬಿಂಬಿಸುವುದಿಲ್ಲ, ಆದ್ದರಿಂದ, ಸರ್ಕಾರವು ಅಂತಹ ಹೇಳಿಕೆಯನ್ನು ಯಾವುದೇ ರೂಪದಲ್ಲಿ ಅಥವಾ ರೀತಿಯಲ್ಲಿ ಅನುಮೋದಿಸುವುದಿಲ್ಲ ಅಥವಾ ಬೆಂಬಲಿಸುವುದಿಲ್ಲ” ಎಂದು ಹೇಳಿದೆ.
ಇದಕ್ಕೂ ಮುನ್ನ ಮಾರ್ಚ್‌ನಲ್ಲಿ ಬಾಂಗ್ಲಾ ಮುಖ್ಯಸ್ಥ ಯೂನುಸ್ ಚೀನಾಕ್ಕೆ ಭೇಟಿ ನೀಡಿದಾಗ, ಬಾಂಗ್ಲಾದೇಶದೊಂದಿಗೆ ಸುಮಾರು 1,600 ಕಿ.ಮೀ ಗಡಿಯನ್ನು ಹಂಚಿಕೊಂಡಿರುವ ಭಾರತದ ಏಳು ಈಶಾನ್ಯ ರಾಜ್ಯಗಳು ಭೂಬಂಧಿತವಾಗಿವೆ. ಅದಕ್ಕೆ ತಮ್ಮ ದೇಶದ ಮೂಲಕ ಹೊರತುಪಡಿಸಿ ಸಾಗರವನ್ನು ತಲುಪಲು ಯಾವುದೇ ಮಾರ್ಗವಿಲ್ಲ ಎಂದು ಹೇಳಿದ್ದರು. ಜತೆಗೆ, ಢಾಕಾವು ಈ ಪ್ರದೇಶದಲ್ಲಿ ಹಿಂದೂ ಮಹಾಸಾಗರದ ಏಕೈಕ ರಕ್ಷಕ ಎಂದು ಹೇಳಿದ್ದರು. ಜತೆಗೆ ಬಾಂಗ್ಲಾದೇಶದ ಮೂಲಕ ವಿಶ್ವದಾದ್ಯಂತ ಸರಕುಗಳನ್ನು ಕಳುಹಿಸಲು ಚೀನಾಗೆ ಆಹ್ವಾನ ನೀಡಿದ್ದರು.