ಬೆಂಗಳೂರು : ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು (ಬಿಸಿಬಿ) ತನ್ನ ಬಹುನಿರೀಕ್ಷಿತ ಹಾಗೂ ಚೊಚ್ಚಲ ಆವೃತ್ತಿಯ ‘ಮಹಿಳಾ ಬಾಂಗ್ಲಾದೇಶ ಪ್ರೀಮಿಯರ್ ಲೀಗ್’ (ಡಬ್ಲ್ಯುಬಿಪಿಎಲ್) ಟಿ20 ಟೂರ್ನಿಯನ್ನು ಆಯೋಜಿಸಲು ಸಕಲ ಸಿದ್ಧತೆ ನಡೆಸಿದೆ. ಈ ಐತಿಹಾಸಿಕ ಟೂರ್ನಿಯಲ್ಲಿ ಪಾಲ್ಗೊಳ್ಳುವಂತೆ ಸ್ಮೃತಿ ಮಂಧಾನ ಸೇರಿದಂತೆ ಭಾರತದ ತಾರಾ ಕ್ರಿಕೆಟರ್‌ಗಳಿಗೆ ಬಾಂಗ್ಲಾದೇಶ ಮುಕ್ತ ಆಹ್ವಾನ ನೀಡಿದೆ. ಇತ್ತೀಚೆಗಷ್ಟೇ 2026ರ ಟಿ20 ವಿಶ್ವಕಪ್‌ಗೆ ಮುನ್ನ ಭಾರತ ಮತ್ತು ಬಾಂಗ್ಲಾದೇಶ ನಡುವೆ ಉಂಟಾಗಿದ್ದ ಬಿರುಕಿನ ನಡುವೆಯೂ, ಕ್ರೀಡಾ ಬಾಂಧವ್ಯವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಬಾಂಗ್ಲಾ ಕ್ರಿಕೆಟ್ ಮಂಡಳಿಯು ಭಾರತೀಯ ಆಟಗಾರ್ತಿಯರಿಗೆ ಕೆಂಪುಹಾಸು ಹಾಸಲು ಮುಂದಾಗಿರುವುದು ಕ್ರಿಕೆಟ್ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಏಪ್ರಿಲ್ ತಿಂಗಳಲ್ಲಿ ಚೊಚ್ಚಲ ಡಬ್ಲ್ಯುಬಿಪಿಎಲ್
ಕ್ರಿಕ್‌ಬಜ್ ವರದಿಯ ಪ್ರಕಾರ, ಮಹಿಳಾ ಬಿಪಿಎಲ್‌ನ ಮೊದಲ ಆವೃತ್ತಿಯು ಏಪ್ರಿಲ್ 4ರಿಂದ ಏಪ್ರಿಲ್ 14ರವರೆಗೆ ನಡೆಯಲಿದ್ದು, ಒಟ್ಟು ಮೂರು ತಂಡಗಳು ಈ ಚುಟುಕು ಕದನದಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿವೆ. ಲೀಗ್‌ನ ಉದ್ಘಾಟನಾ ಪಂದ್ಯವು ಚಟ್ಟೋಗ್ರಾಮ್‌ನಲ್ಲಿ ನಡೆಯಲಿದ್ದರೆ, ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ರಾಜಧಾನಿ ಢಾಕಾ ಆತಿಥ್ಯ ವಹಿಸಲಿದೆ. ಬುಧವಾರ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಸಮನ್ವಯ ಸಭೆಯ ಬಳಿಕ ಬಿಸಿಬಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ.
ಭಾರತೀಯ ಆಟಗಾರ್ತಿಯರಿಗೆ ಯಾವುದೇ ನಿರ್ಬಂಧವಿಲ್ಲ
ಮಹಿಳಾ ಬಿಪಿಎಲ್ ಆಡಳಿತ ಮಂಡಳಿ ಹಾಗೂ ಬಿಸಿಬಿ ಮಹಿಳಾ ವಿಭಾಗದ ಅಧ್ಯಕ್ಷೆ ರುಬಾಬಾ ದೌಲಾ ಅವರು ಈ ಟೂರ್ನಿಯ ರೂಪುರೇಷೆಗಳ ಬಗ್ಗೆ ಪತ್ರಕರ್ತರಿಗೆ ವಿವರಣೆ ನೀಡಿದ್ದಾರೆ. ಭಾರತೀಯ ಕ್ರಿಕೆಟಿಗರು ಟೂರ್ನಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆಯೇ ಎಂಬ ನಿರ್ದಿಷ್ಟ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಅವರು, ಯಾವುದೇ ರಾಷ್ಟ್ರದ ಆಟಗಾರರ ಮೇಲೆ ತಾವು ಯಾವುದೇ ರೀತಿಯ ನಿರ್ಬಂಧ ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಟೂರ್ನಿಗೆ ಎಲ್ಲರಿಗೂ ಮುಕ್ತ ಸ್ವಾಗತವಿದ್ದು, ಫ್ರಾಂಚೈಸಿಗಳು ಯಾವ ಆಟಗಾರ್ತಿಯರನ್ನು ತಂಡಕ್ಕೆ ಸೇರಿಸಿಕೊಳ್ಳಲು ಬಯಸುತ್ತಾರೋ, ಅವರನ್ನು ಮುಕ್ತವಾಗಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ಈಗಾಗಲೇ ಹಲವು ಅಂತರರಾಷ್ಟ್ರೀಯ ತಾರಾ ಆಟಗಾರ್ತಿಯರು ಟೂರ್ನಿಯಲ್ಲಿ ಆಡಲು ಉತ್ಸಾಹ ತೋರಿದ್ದು, ಆಡಳಿತ ಮಂಡಳಿ ಹಾಗೂ ಕಾರ್ಯಕಾರಿ ಸಮಿತಿಯ ಜಂಟಿ ಸಹಯೋಗದಲ್ಲಿ ಟೂರ್ನಿಯನ್ನು ಯಶಸ್ವಿಗೊಳಿಸಲು ನಿರಂತರ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಟಿ20 ವಿಶ್ವಕಪ್ ವಿವಾದದ ಹಿನ್ನೆಲೆ
ಇತ್ತೀಚಿನ ಭೌಗೋಳಿಕ-ರಾಜಕೀಯ ಉದ್ವಿಗ್ನತೆಯ ಕಾರಣದಿಂದಾಗಿ ಭಾರತ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗಳ ನಡುವೆ ತೀವ್ರ ಸ್ವರೂಪದ ಶೀತಲ ಸಮರವೇ ನಡೆದಿತ್ತು. ಬಿಸಿಸಿಐ ನಿರ್ದೇಶನದ ಮೇರೆಗೆ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಐಪಿಎಲ್ 2026 ಟೂರ್ನಿಯಿಂದ ಕೈಬಿಟ್ಟಿತ್ತು. ಈ ನಡೆಯನ್ನು ಖಂಡಿಸಿ ಭಾರತ ಮತ್ತು ಐಸಿಸಿ ವಿರುದ್ಧ ತಿರುಗಿಬಿದ್ದಿದ್ದ ಬಿಸಿಬಿ ಅಧಿಕಾರಿಗಳು, ಪ್ರತಿಭಟನೆಯ ರೂಪದಲ್ಲಿ ಭಾರತದಲ್ಲಿ ನಡೆಯಬೇಕಿದ್ದ 2026ರ ಟಿ20 ವಿಶ್ವಕಪ್‌ಗೆ ಬಾಂಗ್ಲಾದೇಶ ತಂಡವನ್ನು ಕಳುಹಿಸದಿರಲು ನಿರ್ಧರಿಸಿದ್ದರು. ಬಾಂಗ್ಲಾ ಮಂಡಳಿಯ ಈ ಪಟ್ಟು ಸಡಿಲಿಸದ ನಿಲುವಿನಿಂದಾಗಿ, ಐಸಿಸಿ ಅನಿವಾರ್ಯವಾಗಿ ಬಾಂಗ್ಲಾದೇಶ ತಂಡವನ್ನೇ ಪ್ರತಿಷ್ಠಿತ ಟೂರ್ನಿಯಿಂದ ಹೊರಹಾಕಿತ್ತು. ಈ ಬೆಳವಣಿಗೆಯು ಉಭಯ ನೆರೆಹೊರೆ ರಾಷ್ಟ್ರಗಳ ನಡುವೆ ಭಾರೀ ಕದನಕ್ಕೆ ಕಾರಣವಾಗಿತ್ತು.
ರಾಜಕೀಯ ಬದಲಾವಣೆ, ಬಾಂಧವ್ಯ ವೃದ್ಧಿಯ ಆಶಯ
ಇದೀಗ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ಮುಕ್ತಾಯಗೊಂಡು ಹೊಸ ರಾಜಕೀಯ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ಕ್ರಿಕೆಟ್ ಮಂಡಳಿಯ ನಿಲುವಿನಲ್ಲೂ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತಿವೆ. ಬಿಸಿಸಿಐ ಜೊತೆಗಿನ ಹದಗೆಟ್ಟಿದ್ದ ಬಾಂಧವ್ಯವನ್ನು ಮರುಸ್ಥಾಪಿಸಲು ಬಿಸಿಬಿ ಅಧಿಕಾರಿಗಳು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಇದರ ಮೊದಲ ಹೆಜ್ಜೆಯೆಂಬಂತೆ, ಮುಂಬರುವ ಮಹಿಳಾ ಬಿಪಿಎಲ್ ಟೂರ್ನಿಗೆ ಸ್ಮೃತಿ ಮಂಧಾನ ಸೇರಿದಂತೆ ಭಾರತದ ಪ್ರಮುಖ ಆಟಗಾರ್ತಿಯರನ್ನು ಆಹ್ವಾನಿಸುವ ಮೂಲಕ ಬಿಸಿಬಿ ಸ್ನೇಹದ ಹಸ್ತ ಚಾಚಿದೆ. ಇದು ಭವಿಷ್ಯದಲ್ಲಿ ಉಭಯ ದೇಶಗಳ ಕ್ರಿಕೆಟ್ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ವಿಶ್ವಾಸ ಮೂಡಿಸಿದೆ.
ಇದನ್ನೂ ಓದಿ : ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಅಲ್ಟ್ರಾ!


















