ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಮತ್ತು ಆಟಗಾರರ ನಡುವಿನ ಶೀತಲ ಸಮರ ಈಗ ಸ್ಫೋಟಕ ಹಂತ ತಲುಪಿದೆ. ಮಂಡಳಿಯ ನಿರ್ದೇಶಕ ನಜ್ಮುಲ್ ಇಸ್ಲಾಂ ಅವರು ಬುಧವಾರ ನೀಡಿದ ವಿವಾದಾತ್ಮಕ ಹೇಳಿಕೆಯು ಆಟಗಾರರ ಆಕ್ರೋಶಕ್ಕೆ ಕಾರಣವಾಗಿದ್ದು, ಅವರು ರಾಜೀನಾಮೆ ನೀಡದಿದ್ದರೆ ಎಲ್ಲಾ ಮಾದರಿಯ ಕ್ರಿಕೆಟ್ ಅನ್ನು ಬಹಿಷ್ಕರಿಸುವುದಾಗಿ ಸ್ಟಾರ್ ಆಟಗಾರರು ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆಯಿಂದಾಗಿ ಬಾಂಗ್ಲಾದೇಶ ಕ್ರಿಕೆಟ್‌ನಲ್ಲಿ ಅನಿಶ್ಚಿತತೆಯ ವಾತಾವರಣ ನಿರ್ಮಾಣವಾಗಿದ್ದು, ಆಡಳಿತ ಮಂಡಳಿ ಮುಜುಗರಕ್ಕೆ ಈಡಾಗಿದೆ.
ಆಟಗಾರರ ಬದ್ಧತೆ ಪ್ರಶ್ನಿಸಿದ ನಜ್ಮುಲ್ ಇಸ್ಲಾಂ: ವಿವಾದದ ಕಿಡಿ
ವಿವಾದದ ಮೂಲವಿರುವುದು ನಜ್ಮುಲ್ ಇಸ್ಲಾಂ ಅವರು ಮಾಧ್ಯಮಗಳ ಮುಂದೆ ನೀಡಿದ ಉದ್ಧಟತನದ ಹೇಳಿಕೆಯಲ್ಲಿ. “ನಾವು ಆಟಗಾರರ ಮೇಲೆ ಅಪಾರ ಹಣ ಖರ್ಚು ಮಾಡುತ್ತೇವೆ, ಆದರೆ ಅವರು ಮೈದಾನದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದಾರೆ. ಇಂದಿಗೂ ನಮಗೆ ಒಂದು ಜಾಗತಿಕ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ನೀವು ಸರಿಯಾಗಿ ಆಡದಿದ್ದರೆ, ನಿಮ್ಮ ಮೇಲೆ ಖರ್ಚು ಮಾಡಿದ ಹಣವನ್ನು ವಾಪಸ್ ಕೇಳಬೇಕಾಗುತ್ತದೆ” ಎಂಬ ಧಾಟಿಯಲ್ಲಿ ನಜ್ಮುಲ್ ಮಾತನಾಡಿದ್ದರು. ರಾಷ್ಟ್ರೀಯ ಆಟಗಾರರ ಬದ್ಧತೆಯನ್ನು ಸಾರ್ವಜನಿಕವಾಗಿ ಪ್ರಶ್ನಿಸಿರುವುದು ಸೀನಿಯರ್ ಆಟಗಾರರನ್ನು ಕೆರಳಿಸಿದೆ.
ಆಟಗಾರರ ಸಂಘದ ಖಡಕ್ ನಿರ್ಧಾರ ಮತ್ತು ತಮೀಮ್ ಇಕ್ಬಾಲ್ ವಿವಾದ
ನಿರ್ದೇಶಕನ ಈ ಮಾತುಗಳಿಗೆ ತಕ್ಷಣವೇ ಪ್ರತಿಕ್ರಿಯಿಸಿದ ಬಾಂಗ್ಲಾದೇಶ ಕ್ರಿಕೆಟ್ ಆಟಗಾರರ ಕಲ್ಯಾಣ ಸಂಘದ (CWAB) ಅಧ್ಯಕ್ಷ ಮೊಹಮ್ಮದ್ ಮಿಥುನ್, ನಜ್ಮುಲ್ ಇಸ್ಲಾಂ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಯಾವುದೇ ಆಟಗಾರ ಕ್ರಿಕೆಟ್ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಅಂದಹಾಗೆ, ನಜ್ಮುಲ್ ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಮಾಜಿ ನಾಯಕ ತಮೀಮ್ ಇಕ್ಬಾಲ್ ಅವರನ್ನು ‘ಭಾರತದ ಏಜೆಂಟ್’ ಎಂದು ಕರೆದು ದೊಡ್ಡ ಮಟ್ಟದ ವಿವಾದ ಸೃಷ್ಟಿಸಿದ್ದರು. ಇಂತಹ ಬಾಲಿಶ ಹೇಳಿಕೆಗಳು ಆಟಗಾರರ ಮನೋಬಲವನ್ನು ಕುಗ್ಗಿಸುತ್ತಿವೆ ಎಂದು ಮಾಜಿ ನಾಯಕ ಮೊಹಮ್ಮದ್ ಅಶ್ರಫುಲ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಸಂಕಷ್ಟದಲ್ಲಿ ಮಂಡಳಿ: ಆಟಗಾರರ ಪರ ನಿಂತ ಬಿಸಿಬಿ ಆಡಳಿತ
ಆಟಗಾರರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ನಜ್ಮುಲ್ ಇಸ್ಲಾಂ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ನಜ್ಮುಲ್ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಅದು ಮಂಡಳಿಯ ಅಧಿಕೃತ ನಿಲುವಲ್ಲ ಎಂದು ಬಿಸಿಬಿ ಸ್ಪಷ್ಟಪಡಿಸಿದೆ. “ಆಟಗಾರರು ಬಾಂಗ್ಲಾ ಕ್ರಿಕೆಟ್‌ನ ಹೃದಯವಿದ್ದಂತೆ, ಅವರ ಶ್ರೇಯೋಭಿವೃದ್ಧಿಯೇ ನಮಗೆ ಮುಖ್ಯ” ಎಂದು ಹೇಳಿಕೆ ಬಿಡುಗಡೆ ಮಾಡುವ ಮೂಲಕ ಆಟಗಾರರನ್ನು ಸಮಾಧಾನಪಡಿಸಲು ಮಂಡಳಿ ಮುಂದಾಗಿದೆ. ಆದರೆ, ನಿರ್ದೇಶಕನ ರಾಜೀನಾಮೆಗೆ ಪಟ್ಟು ಹಿಡಿದಿರುವ ಆಟಗಾರರು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಲಕ್ಷಣಗಳು ಕಾಣುತ್ತಿಲ್ಲ.
ಇದನ್ನೂ ಓದಿ: ಕೊಹ್ಲಿ ಸಾಮ್ರಾಜ್ಯಕ್ಕೆ ಬೆದರಿಕೆ | ನಂಬರ್ 1 ಪಟ್ಟಕ್ಕೆ ಡೇರಿಲ್ ಮಿಚೆಲ್ ಲಗ್ಗೆ!



















