ಢಾಕಾ: ಮುಂಬರುವ 2026ರ ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಭಾರತ ಮತ್ತು ಶ್ರೀಲಂಕಾದಲ್ಲಿ ಜಂಟಿಯಾಗಿ ಆಯೋಜಿಸಲಾಗುವ ಐಸಿಸಿ ಟಿ20 ವಿಶ್ವಕಪ್‌ಗಾಗಿ ಬಾಂಗ್ಲಾದೇಶವು 15 ಸದಸ್ಯರ ಅಧಿಕೃತ ತಂಡವನ್ನು ಪ್ರಕಟಿಸಿದೆ. ಈ ಮಹತ್ವದ ಟೂರ್ನಿಯಲ್ಲಿ ಬಾಂಗ್ಲಾದೇಶದ ಸಾರಥ್ಯವನ್ನು ಅಗ್ರ ಕ್ರಮಾಂಕದ ಬ್ಯಾಟರ್ ಲಿಟ್ಟನ್ ಕುಮಾರ್ ದಾಸ್ ಅವರು ವಹಿಸಲಿದ್ದು, ಸೈಫ್ ಹಸನ್ ಉಪನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ವಿಚಾರಗಳು ಸುದ್ದಿಯಾಗುತ್ತಿರುವ ಈ ಸಮಯದಲ್ಲಿ, ಹಿಂದೂ ಸಮುದಾಯಕ್ಕೆ ಸೇರಿದ ಲಿಟ್ಟನ್ ದಾಸ್ ಅವರಿಗೆ ನಾಯಕತ್ವದ ಪಟ್ಟ ನೀಡಿರುವುದು ವಿಶೇಷವಾಗಿದೆ.
ವೇಗಿ ತಸ್ಕಿನ್ ಅಹ್ಮದ್ ಪುನರಾಗಮನ; ಸ್ಟಾರ್ ಆಟಗಾರರಿಗೆ ಕೊಕ್
ಇತ್ತೀಚಿನ ಗಾಯದ ಸಮಸ್ಯೆಯಿಂದಾಗಿ ಐರ್ಲೆಂಡ್ ವಿರುದ್ಧದ ಸರಣಿಯನ್ನು ತಪ್ಪಿಸಿಕೊಂಡಿದ್ದ ಸ್ಟಾರ್ ವೇಗಿ ತಸ್ಕಿನ್ ಅಹ್ಮದ್ ತಂಡಕ್ಕೆ ಮರಳಿರುವುದು ಬಾಂಗ್ಲಾ ಬೌಲಿಂಗ್ ವಿಭಾಗಕ್ಕೆ ಬಲ ತುಂಬಿದೆ. ಆದಾಗ್ಯೂ, ತಂಡದಲ್ಲಿ ಕೆಲವು ಅಚ್ಚರಿಯ ಬದಲಾವಣೆಗಳನ್ನು ಮಾಡಲಾಗಿದ್ದು, ಅನುಭವಿ ಆಟಗಾರ ನಜ್ಮುಲ್ ಹೊಸೈನ್ ಶಾಂಟೊ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಇದರೊಂದಿಗೆ ವಿಕೆಟ್ ಕೀಪರ್ ಜಾಕರ್ ಅಲಿ ಮತ್ತು ಮಹಿದುಲ್ ಇಸ್ಲಾಂ ಅಂಕಾನ್ ಕೂಡ 15ರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಭಾರತದಲ್ಲಿ ಪಂದ್ಯ ಆಡಲು ಬಾಂಗ್ಲಾ ನಕಾರ: ಭದ್ರತಾ ಆತಂಕ
ವಿಶ್ವಕಪ್ ಅಭಿಯಾನವನ್ನು ಬಾಂಗ್ಲಾದೇಶವು ಫೆಬ್ರವರಿ 7 ರಂದು ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದೊಂದಿಗೆ ಆರಂಭಿಸಬೇಕಿದೆ. ಆದರೆ, ಬಿಸಿಸಿಐ ಸೂಚನೆಯಂತೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಕೈಬಿಟ್ಟಿರುವುದು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಸರ್ಕಾರವು ತನ್ನ ಆಟಗಾರರ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಭಾರತದಲ್ಲಿ ನಡೆಯಲಿರುವ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಐಸಿಸಿಗೆ ಪತ್ರ ಬರೆಯಲು ಸಜ್ಜಾಗಿದೆ.
ಬಾಂಗ್ಲಾದೇಶದ 15 ಸದಸ್ಯರ ಅಧಿಕೃತ ತಂಡ
ಬಾಂಗ್ಲಾದೇಶವು ಈ ಬಾರಿಯ ವಿಶ್ವಕಪ್‌ನಲ್ಲಿ ಇಂಗ್ಲೆಂಡ್, ವೆಸ್ಟ್ ಇಂಡೀಸ್, ನೇಪಾಳ ಮತ್ತು ಇಟಲಿಯೊಂದಿಗೆ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.
ನಾಯಕ: ಲಿಟ್ಟನ್ ಕುಮಾರ್ ದಾಸ್
- ಉಪನಾಯಕ: ಮೊಹಮ್ಮದ್ ಸೈಫ್ ಹಸನ್
- ತಂಡದ ಸದಸ್ಯರು: ತಂಜಿದ್ ಹಸನ್, ಮೊಹಮ್ಮದ್ ಪರ್ವೇಜ್ ಹೊಸೈನ್ ಎಮನ್, ತೌಹಿದ್ ಹೃದಯೋಯ್, ಶಮೀಮ್ ಹೊಸೈನ್, ಖಾಜಿ ನೂರುಲ್ ಹಸನ್ ಸೋಹನ್, ಮಹೇದಿ ಹಸನ್, ರಿಶಾದ್ ಹೊಸೈನ್, ನಸುಮ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ತಂಝಿಮ್ ಹಸನ್ ಸಾಕಿಬ್, ತಸ್ಕಿನ್ ಅಹ್ಮದ್, ಎಂಡಿ ಶೈಫುದ್ದೀನ್, ಶೋರಿಫುಲ್ ಇಸ್ಲಾಂ.
ಇದನ್ನೂ ಓದಿ: ಸಚಿನ್ ತೆಂಡೂಲ್ಕರ್ ದಾಖಲೆಯತ್ತ ಜೋ ರೂಟ್ ಲಗ್ಗೆ | ಸಿಡ್ನಿ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಅಬ್ಬರ



















