ನವದೆಹಲಿ: ಪಕ್ಕದ ದೇಶ ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ಸಂಜೆ ಉನ್ನತ ಮಟ್ಟದ ಸಭೆ ನಡೆಯಿತು.
ಈ ವೇಳೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಮೋದಿ ಹಲವು ಸಚಿವರೊಂದಿಗೆ ಚರ್ಚಿಸಿದರು. ಈ ಸಭೆಯಲ್ಲಿ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಸಚಿವರು ಇದ್ದರು.
ಪ್ರಧಾನಿಯ ನಿವಾಸದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಬಾಂಗ್ಲಾದೇಶದ ಪರಿಸ್ಥಿತಿಯ ಕುರಿತು ಪ್ರಧಾನಿ ಮೋದಿಗೆ ಮಾಹಿತಿ ನೀಡಲಾಯಿತು. ಬಾಂಗ್ಲಾದೇಶದ ಮಾಜಿ ಪಿಎಂ ಶೇಖ್ ಹಸೀನಾ ಲಂಡನ್ ಗೆ ತೆರಳುತ್ತಿದ್ದಾಗ ತನ್ನ ದೇಶದಲ್ಲಿನ ಪ್ರಕ್ಷುಬ್ಧತೆಯ ನಡುವೆ ಘಜಿಯಾಬಾದ್ ಬಳಿಯ ಹಿಂಡನ್ ವಾಯುನೆಲೆಗೆ ಬಂದಿಳಿದ ನಂತರ ವಿದೇಶಾಂಗ ಸಚಿವ ಜೈಶಂಕರ್ ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದರು. ಜೈಶಂಕರ್ ಅವರು ನೆರೆಯ ದೇಶದ ಪರಿಸ್ಥಿತಿಯ ಕುರಿತು ಪ್ರಧಾನಿಗೆ ವಿವರಿಸಿದ್ದರು ಎನ್ನಲಾಗಿದೆ.
ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೂ ಬಾಂಗ್ಲಾದೇಶದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಬಾಂಗ್ಲಾದೇಶ ಹಲವು ವರ್ಷಗಳಿಂದ ಮೀಸಲಾತಿ ವಿರೋಧಿ ಚಳವಳಿಯೊಂದಿಗೆ ಹೋರಾಡುತ್ತಿದೆ. ಆಡಳಿತಾರೂಢ ಅವಾಮಿ ಲೀಗ್ ಕಾರ್ಯಕರ್ತರು, ಮತ್ತೊಂದೆಡೆ ಚಳವಳಿಗಾರರು ಬಾಂಗ್ಲಾದೇಶವನ್ನು ರಣರಂಗವನ್ನಾಗಿ ಮಾಡಿದರು. ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶಗೊಂಡು ಜಿಲ್ಲಾ ಕಾರಾಗೃಹಕ್ಕೆ ಬೆಂಕಿ ಹಚ್ಚಿ, ಕೈದಿಗಳನ್ನು ಬಿಡುಗಡೆಗೊಳಿಸಿದರು. ಜೊತೆಗೆ ರಾಷ್ಟ್ರೀಯ ಟಿವಿ ವಾಹಿನಿಯೊಂದರ ಮೇಲೆ ದಾಳಿ ನಡೆಸಿದರು.
ಅಲ್ಲಿನ ಪ್ರಧಾನಿ ಕಚೇರಿ ಮತ್ತು ಸೆಂಟ್ರಲ್ ಬ್ಯಾಂಕ್ ಮೇಲೆ ದಾಳಿ ನಡೆಯಿತು. ಈ ಪ್ರತಿಭಟನೆ ಬಾಂಗ್ಲಾದೇಶದ ಎಲ್ಲೆಡೆ ವ್ಯಾಪಿಸಿತು. ಘರ್ಷಣೆಯಲ್ಲಿ ಇಲ್ಲಿಯವರೆಗೆ 300ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಸಿರಾಜ್‌ಗಂಜ್ ಪೊಲೀಸ್ ಠಾಣೆಯ ಮೇಲೆ ಗುಂಪೊಂದು ದಾಳಿ ನಡೆಸಿ 13 ಜನ ಪೊಲೀಸರನ್ನು ಬಲಿ ಪಡೆದಿದೆ. ಸರ್ಕಾರದ ವಿರೋಧಿ ಪ್ರತಿಭಟನೆಯ ನಂತರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ದೇಶದಿಂದ ಪಲಾಯಾನ ಮಾಡಿದ್ದಾರೆ.