ಬೆಂಗಳೂರು | ಒಂದೆಡೆ ವಿಜ್ಞಾನ ಕಾರ್ಯಗಾರ ವಿಚಾರ ಸಂಕಿರಣಗಳು, ವಿಷಯ ತಜ್ಞರ ಚರ್ಚೆ ಹಾಗೂ ಮತ್ತೊಂದೆಡೆ ಸಸ್ಯ ಶಾಸ್ತ್ರ, ಪ್ರಾಣಿ ಶಾಸ್ತ್ರ, ಭೂವಿಜ್ಞಾನ ವಿಭಾಗ ಸಂಗ್ರಹಾಲಯಗಳಲ್ಲಿ ಜೀವ ವೈವಿಧ್ಯ ಸಂಗ್ರಹಗಳು, ವಿವಿಧ ಜೀವಿ ಮಾದರಿಗಳು, ವೈಜ್ಞಾನಿಕ ಪ್ರದರ್ಶನಗಳು ಮತ್ತು ವಿಜ್ಞಾನ ವಸ್ತು ಪ್ರದರ್ಶನಗಳು. ಈ ದೃಶ್ಯ ಕಂಡುಬಂದಿದ್ದು ಬೆಂಗಳೂರು ವಿಶ್ವವಿದ್ಯಾಲಯ ವಿಜ್ಞಾನ ಉತ್ಸವ -2026 ಕಾರ್ಯಕ್ರಮದಲ್ಲಿ.

ಹೌದು.. ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಸೈನ್ಸ್ ಫೋರಮ್ (ಬಿಯುಎಸ್‌ಎಫ್) ಹಾಗೂ ಪಿಎಂ ಉಷಾ ಸಹಯೋಗದೊಂದಿಗೆ ಆಯೋಜಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯ ವಿಜ್ಞಾನ ಉತ್ಸವ -2026 ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಾದ ಪ್ರೊ.ಎಸ್.ಆರ್.ನಿರಂಜನ ಅವರು ಭಾಗವಹಿಸಿ ಮಾತನಾಡಿ “ಅಂತರಶಾಖಾ ಮತ್ತು ಬಹುಶಾಖಾ ಶಿಕ್ಷಣ ವ್ಯವಸ್ಥೆ ಹೊಸದಲ್ಲ, ನಳಂದಾ ಮತ್ತು ತಕ್ಷಶೀಲಾ ಕಾಲದಲ್ಲಿಯೇ ಇದು ಅಸ್ತಿತ್ವದಲ್ಲಿತ್ತು. ಮೂಲ ವಿಷಯಗಳೊಂದಿಗೆ ಕೌಶಲ್ಯಾಧಾರಿತ ಶಿಕ್ಷಣವನ್ನು ಒದಗಿಸುವುದು ಇಂದಿನ ಪ್ರಸ್ತುತತೆಗೆ ಅಗತ್ಯವಾಗಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಹಸಿರು ಕ್ರಾಂತಿ, ಅಂತರಿಕ್ಷ ಕ್ಷೇತ್ರ ಹಾಗೂ ಕೋವಿಡ್ ಲಸಿಕೆ ಅಭಿವೃದ್ಧಿಯಂತಹ ವಿಜ್ಞಾನ–ತಂತ್ರಜ್ಞಾನ ಸಾಧನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಸಮಾಜದ ಅಗತ್ಯಗಳಿಗೆ ತಕ್ಕಂತೆ ಜ್ಞಾನವನ್ನು ಒದಗಿಸುವ ಅಂತರಶಾಖಾ ಶಿಕ್ಷಣ ಮತ್ತು ತಂತ್ರಜ್ಞಾನ ಆಧಾರಿತ ಬೆಳವಣಿಗೆಯಿಂದ ವಿಕಸಿತ ಭಾರತ ನಿರ್ಮಾಣ ಸಾಧಿಸಬಹುದು” ಎಂದು ತಿಳಿಸಿದರು.

ಐಐಟಿ ಧಾರವಾಡದ ಪ್ರಾಧ್ಯಪಕರಾದ ಪ್ರೊ.ಡಾ.ಶಿವಪ್ರಸಾದ್ ಎಸ್.ಎಂ ಮಾತನಾಡಿ, “ಅನ್ವಯಿಕ ವಿಜ್ಞಾನ ಮತ್ತು ಮೂಲಕ ವಿಜ್ಞಾನ ಜಾಗತಿಕ ಪ್ರಗತಿಯ ಬಲವಾದ ಆಧಾರವಾಗಿದೆ. ಪ್ರಸ್ತುತ ವಿಜ್ಞಾನ ವ್ಯಾಪಕವಾಗಿ ಪರಿವರ್ತನೆಯಾಗುತ್ತಿದ್ದು ಶಿಕ್ಷಣ ವ್ಯವಸ್ಥೆ ಕೂಡ ಭವಿಷ್ಯಕ್ಕೆ ತಕ್ಕಂತೆ ಬದಲಾಗಬೇಕು. ಸಂಶೋಧನೆ ಮತ್ತು ಶಿಕ್ಷಣವು ಜೊತೆಯಾಗಿ ಸಾಗಬೇಕು, ಪ್ರಾಯೋಗಿಕ ಹಾಗೂ ಚಿಂತನಾ ಆಧಾರಿತ ಕಲಿಕೆ ಅಗತ್ಯವಾಗಿದೆ. ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಭಿನ್ನ ಚಿಂತನೆಗೆ ತೆರೆದುಕೊಳ್ಳಬೇಕು” ಎಂದು ಆಶಯ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ.ಜಯಕರ ಎಸ್.ಎಂ ಮಾತನಾಡಿ “ಪ್ರಾಯೋಗಿಕ ವಿಜ್ಞಾನ ಮತ್ತು ಮಾದರಿಗಳು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿರಲಿದೆ. ಈ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಸಂಶೋಧನೆ ಮತ್ತು ನವೀನತೆಗೆ ಪ್ರೇರೆಪಿಸಲಿದೆ, ವೈಜ್ಞಾನಿಕ ಮನೋಭಾವವನ್ನು ಸಮಾಜದಲ್ಲಿ ವಿಸ್ತರಿಸುವುದು” ಬೆಂಗಳೂರು ವಿಶ್ವವಿದ್ಯಾಲಯದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವರು ಕೆ.ಟಿ.ಶಾಂತಲಾ, ಕುಲಸಚಿವರು (ಮೌಲ್ಯಮಾಪನ)ಪ್ರೊ.ಸಿ.ಎಸ್.ಕರಿಗಾರ್,ವಿಜ್ಞಾನ ನಿಕಾಯದ ಡೀನರು ಪ್ರೊ.ನಾಗಯ್ಯ ಸೇರಿದಂತೆ ಅನೇಕ ಡೀನರು,ಮುಖ್ಯಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಂವಿವಿ ವಿಜ್ಞಾನ ಉತ್ಸವದಲ್ಲಿ ಒಟ್ಟು 1250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೊಂದಾಯಿತರಾಗಿದ್ದು, ವಿಜ್ಞಾನ ಮಾದರಿ ಸ್ಪರ್ಧೆ, ವಿಜ್ಞಾನ ಪೋಸ್ಟ್‌ರ್ ಪ್ರಸ್ತುತಿ,ಕ್ಚಿಜ್ ಸ್ಪರ್ಧೆ, ಪ್ರಬಂಧ ಬರವಣಿಗೆ,ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದರು. ಜ್ಞಾನಭಾರತಿ ಆವರಣದ ಒಟ್ಟು 6 ಸ್ನಾತಕೋತ್ತರ ವಿಭಾಗಗಳಲ್ಲಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ,ಕಾರ್ಯಗಾರ, ವಿಜ್ಞಾನಿಗಳ ಜೊತೆ ಸಂವಾದ ಏರ್ಪಡಿಸಲಾಗಿದ್ದು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳು ಸಾರ್ವಜನಿಕ ಮುಕ್ತ ಅವಕಾಶವಿದ್ದು ವಿಜ್ಞಾನಾಸಕ್ತರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಪ್ರಾಯೋಗಿಕ ಅನುಭವ ಪಡೆದುಕೊಂಡರು.
ಇದನ್ನೂ ಓದಿ : ಭಾರತೀಯ ರೈಲ್ವೆಯಿಂದ ‘ಶ್ರೀ ರಾಮಾಯಣ ಯಾತ್ರೆ’.. ಮಾ.30ರಿಂದ ಪುಣ್ಯಕ್ಷೇತ್ರಗಳ ದರ್ಶನ ಅವಕಾಶ!


















