ಬೆಂಗಳೂರು: ಸ್ನೇಹಿತೆಯ ಸಾವಿನ ದುಃಖ ತಳಲಾರಾದೆ ಬಾಲಕಿಯೊಬ್ಬಳು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕಲಾಸಿಪಾಳ್ಯದಲ್ಲಿ ನಡೆದಿದೆ.
ಶರ್ಮಿಳಾ (16) ಆತ್ಮಹತ್ಯೆಗೆ ಶರಣಾದ ಬಾಲಕಿ. ತಂದೆ ತಾಯಿಯ ಜೊತೆಗೆ ವಾಸವಿದ್ದ ಈಕೆ, ಪೋಷಕರು ತಮಿಳುನಾಡಿನ ದೇವಸ್ಥಾನ ಒಂದಕ್ಕೆ ತೆರಳಿದ್ದಾಗ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ಖಾಸಗಿ ಶಾಲೆಯಲ್ಲಿ ಒಂಭತ್ತನೇ ತರಗತಿ ಓದುತ್ತಿದ್ದ ಬಾಲಕಿ ಶಾರ್ಮಿಳ ಹಾಗೂ ಅದೇ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಮತ್ತೋರ್ವ ಬಾಲಕಿ ಇಬ್ಬರೂ ಅತ್ಯಾತ್ಮೀಯರಾಗಿದ್ದರು. ಆ ಬಾಲಕಿ ಕಳೆದ ಎರಡು ಮೂರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಸ್ನೇಹಿತೆಯನ್ನು ಸಾವಿನ ನೋವನ್ನು ತಳಲಾರದೆ ಅದೇ ನೋವಿನಲ್ಲಿ ಬಾಲಕಿ ಶರ್ಮಿಳಾ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಕಳೆದ ಒಂದು ವಾರದಿಂದ ಸತ್ತ ಸ್ನೇಹಿತೆ ಕನಸಿನಲ್ಲಿ ಕಾಣಿಸಿಕೊಂಡಿದ್ದಳಂತೆ. ವಿಚಿತ್ರವಾಗಿ ಕನಸು ಬೀಳುತ್ತಿರುವ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ. ಪೋಷಕರು ಬಳಿಕ ಹಣೆಗೆ ವಿಭೂತಿ, ಕುಂಕುಮ ಹಚ್ಚಿ ಮಲಗಿಸುತ್ತಿದ್ದರು. ಆದರೆ ನಿನ್ನೆ ಪೋಷಕರು ದೇವಸ್ಥಾನಕ್ಕೆ ಎಂದು ತೆರಳಿದ್ದಾಗ ಬಾಲಕಿ ನೇಣಿಗೆ ಶರಣಾಗಿದ್ದಾಳೆ.
ಸದ್ಯ ಕಲಾಸಿಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನಲ್ಲಿ ನಗ್ನ ಮಹಿಳೆಯ ಅಪಾಯಕಾರಿ ಸಾಹಸ ; ವಿಡಿಯೋ ವೈರಲ್


















